ನವದೆಹಲಿ, ಜು. 18, (DaijiworldNews/SM): ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ನಿರಾಕರಿಸಿರುವ ಬಗ್ಗೆ ಹಿರಿಯ ಆಟಗಾರ ಹರ್ಭಜನ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಹೆಸರನ್ನು ಹಿಂಪಡೆಯುವಂತೆ ನಾನೇ ಸರಕಾರವನ್ನು ಆಗ್ರಹಿಸಿದ್ದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ತಮ್ಮ ಟ್ವೀಟರ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ಪಡೆಯುವ ಅರ್ಹತೆ ತನಗಿಲ್ಲ ಎಂಬುವುದಾಗಿ ಬರೆದುಕೊಂಡಿದ್ದಾರೆ.
ನನ್ನ ಹೆಸರು ಶಿಫಾರಸ್ಸು ಮಾಡಿದ ಸಂದರ್ಭದಲ್ಲಿ ನಾನೇ ಪಂಜಾಬ್ ಸರಕಾರವನ್ನು ಒತ್ತಾಯಿಸಿದ್ದೇನೆ. ನನ್ನ ಹೆಸರು ಕೈ ಬಿಡುವಂತೆ ಒತ್ತಾಯಿಸಿದ್ದೇನೆ. ಅದರಂತೆ ನನ್ನ ಹೆಸರು ಕೈ ಬಿಡಲಾಗಿದೆ. ಸತ್ಯವೆಂದರೆ ನಾನು ಖೇಲ್ ರತ್ನಕ್ಕೆ ಅರ್ಹನಲ್ಲ. ಕಳೆದ ಮೂರು ವರ್ಷಗಳ ಅಂತಾರಾಷ್ಟ್ರೀಯ ಪ್ರದರ್ಶನವನ್ನು ಗಮನಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಆದರೆ, ಮೂರು ವರ್ಷಗಳಿಂದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಜ್ಜಿ ಕಾಣಿಸಿಕೊಂಡಿಲ್ಲ.
ಇಲ್ಲಿ ಪಂಜಾಬ್ ಸರ್ಕಾರದ ತಪ್ಪಿಲ್ಲ, ಅವರು ನನ್ನ ಹೆಸರನ್ನು ಹಿಂಪಡೆಯುವ ಹಕ್ಕು ಹೊಂದಿದ್ದಾರೆ ಎಂದು ಹರ್ಭಜನ್ ಬರೆದಿದ್ದಾರೆ.