ನವದೆಹಲಿ, ಜು. 22 (DaijiworldNews/SM): ಕೊರೊನಾ ಕಾರಣದಿಂದ ಕ್ರೀಡಾ ಕ್ಷೇತ್ರದ ಮೇಲೆ ದೊಡ್ಡ ಮಟ್ಟದ ಹೊಡೆತ ಬಿದ್ದಿದೆ. ಕ್ರೀಡಾ ಚಟುವಟಿಕೆಗಳು ಪೂರ್ಣಗೊಳ್ಳುವುದೇ ಪ್ರೇಕ್ಷಕರಿಂದ. ಆದರೆ, ಇದೀಗ ಪ್ರೇಕ್ಷಕರು ಸೇರುವ ಸಮಯವಲ್ಲ. ಈ ನಡುವೆ ಬಹುತೇಕ ಕ್ರೀಡಾಕೂಟಗಳು ಮುಂದೂಡಲ್ಪಟ್ಟಿವೆ. ಈಗಾಗಲೇ ಮುಂದೂಡಲ್ಪಟ್ಟಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಈಗಾಗಲೇ ಅಕ್ಟೋಬರ್-ನವಂಬರ್ ನಲ್ಲಿ ಆಯೋಜನೆಗೊಂಡಿದ್ದ ಟೂರ್ನಿಯ ಪಂದ್ಯಗಳನ್ನು ವೀಕ್ಷಿಸಲು ಪ್ರೇಕ್ಷಕ ವರ್ಗ ಟಿಕೆಟ್ ಪಡೆದುಕೊಂಡಿದೆ. ಆದರೆ, ಟೂರ್ನಿ ಮುಂದೂಡಲ್ಪಟ್ಟ ಕಾರಣ ಪ್ರೇಕ್ಷಕರಿಗೆ ನಿರಾಸೆಯುಂಟಾಗಿದೆ. ಅತ್ತ ಪಂದ್ಯಗಳೂ ಇಲ್ಲ. ಇತ್ತ ಟಿಕೆಟ್ ಪಡೆದು ಹಣವನ್ನು ಕಳೆದುಕೊಂಡಂತಾಗಿದೆ. ಆದರೆ, ಟಿಕೆಟ್ ಪಡೆದಿರುವ ಅಭಿಮಾನಿಗಳಿಗೆ ಐಸಿಸಿ ಸ್ವಲ್ಪ ಸಮಾಧಾನಪಡಿಸಿದೆ.
ಪ್ರಸ್ತುತ ಮುಂದೂಡಿಕೆಯಾಗಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಮಾರಾಟವಾಗಿರುವ ಟಿಕೆಟ್ ಗಳು ಮುಂದಿನ ವರ್ಷಕ್ಕೆ ಅನ್ವಯವಾಗಲಿದೆ ಎಂದು ಸ್ಪಷ್ಟಪಡಿಸಿದ್ದು, ಟಿಕೆಟ್ ಪಡೆದ ಅಭಿಮಾನಿಗಳನ್ನು ನಿರಾಳರನ್ನಾಗಿಸಿದೆ. ಆದರೆ ಮುಂದೂಡಿಕೆಯಾಗಿರುವ ಟೂರ್ನಿ ಆಸ್ಟ್ರೇಲಿಯದಲ್ಲಿ ನಡೆದರೆ ಮಾತ್ರ ಎಂದಿದೆ.
ಒಂದು ವೇಳೆ ಈ ಟೂರ್ನಿ 2022ಕ್ಕೆ ಮುಂದೂಡಿಕೆಯಾದರೆ ಅಥವಾ ಭಾರತದ ಆತಿಥ್ಯದಲ್ಲಿ ನಡೆದರೆ ಎಲ್ಲ ಟಿಕೆಟ್ ಹಣವನ್ನು ಮರು ಪಾವತಿ ಮಾಡಲಾಗುವುದು ಎಂದು ಐಸಿಸಿ ತನ್ನ ವೆಬ್ ಸೈಟ್ ನಲ್ಲಿ ತಿಳಿಸಿದೆ.