ಸೌತಾಂಪ್ಟನ್, ಸೆ 09 (DaijiworldNews/PY): ಟಿ-20ಯ ಮೊದಲ ಎರಡು ಪಂದ್ಯಗಳಲ್ಲಿ ಸೋಲು ಕಂಡ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ದ ಮೂರನೇ ಹಾಗೂ ಅಂತಿಮ ಟಿ-20 ಪಂದ್ಯಾಟದಲ್ಲಿ ಭರ್ಜರಿ ಗೆಲುವು ಸಾಧಿಸಿದೆ.
ಮಂಗಳವಾರ ರಾತ್ರಿ ರೋಸ್ಬೌಲ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ದ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದಿದ್ದು, ಫೀಲ್ಡಿಂಗ್ ಆಯ್ದುಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಆರು ವಿಕೆಟ್ ಕಳೆದುಕೊಂಡು 145 ರನ್ ಕಲೆ ಹಾಕಿತು.
146ರನ್ಗಳ ಗುರಿ ಬೆನ್ನತ್ತಿದ ಆಸಿಸ್ ತಂಡ 19.3 ಓವರ್ಗಳ್ಲಲಿ ಐದು ವಿಕೆಟ್ ಕಳೆದುಕೊಂಡು 146 ರನ್ ಕಲೆ ಹಾಕಿತು. ಫಿಂಚ್ ಹಾಗೂ ಮ್ಯಾಥ್ಯೂ ವೇಡ್ ಜೊತೆಯಾಟದಲ್ಲಿ 31 ರನ್ ಗಳಿಸಿದರು. ವೇಡ್ ಔಟಾದ ಬಳಿಕ ಆಸಿಸ್ ನಾಯಕ ಹಾಗೂ ಮಾರ್ಕಸ್ ಸ್ಟೊಯಿನಿಸ್ ಜೊತೆಯಾಟದಲ್ಲಿ ತಂಡ 39 ರನ್ ಕಲೆ ಹಾಕಿತು.
ನಂತರ 13ನೇ ಓವರ್ನಲ್ಲಿ ಐದು ವಿಕೆಟ್ ಕಳೆದುಕೊಂಡ ಫಿಂಚ್ ಪಡೆ 100 ರನ್ ಗಳಿಸಿತ್ತು. ಈ ನಡುವೆ ಮಿಷಲ್ ಮಾರ್ಶ್ ಹಾಗೂ ಆ್ಯಷ್ಟನ್ ಅಗರ್ 46 ರನ್ ಗಳಿಸಿ ವಿಜಯದ ನಗೆ ಬೀರಿದರು.
ಸೆಪ್ಟೆಂಬರ್ 11ರಂದು ಇಂಗ್ಲೆಂಡ್ - ಆಸ್ಟ್ರೇಲಿಯಾ ತಂಡಗಳ ನಡುವಿನ ಏಕದಿನ ಸರಣಿ ಮ್ಯಾಂಚೆಸ್ಟರ್ನಲ್ಲಿ ನಡೆಯಲಿದೆ.