ಅಬುಧಾಬಿ, ಸೆ. 19 (DaijiworldNews/SM): ಕ್ರಿಕೆಟ್ ಪಂದ್ಯಗಳೆಂದ್ರೆ, ಮೈದಾನದ ಸುತ್ತ ಪ್ರೇಕ್ಷಕರದ್ದೇ ಹವಾ ಇರುತ್ತದೆ. ಆದರೆ, ಹಲವು ಏರಿಳಿತ ಕಂಡ ಬಳಿಕ ಯುಎಇ ಅಂಗಳದಲ್ಲಿ ಸೆಪ್ಟೆಂಬರ್ ೧೯ರಂದು 13ನೇ ಆವೃತ್ತಿಯ ಐಪಿಎಲ್ ಆರಂಭವಾಗಿದ್ದು ಮೈದಾನ ಪ್ರೇಕ್ಷಕರಿಲ್ಲದೆ ಬಿಕೋ ಎನ್ನುತಿದೆ.
13ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯಯದಲ್ಲಿ ಬಲಿಷ್ಠ ಎರಡು ತಂಡಗಳಾದ ಮುಂಬೈ ಹಾಗೂ ಚೆನ್ನೈ ತಂಡಗಳು ಮುಖಾಮುಖಿಯಾಗಿವೆ. ಆದರೆ, ಮೈದಾನದ ಸುತ್ತ ಪ್ರೇಕ್ಷಕರಿಲ್ಲ. ಐಪಿಎಲ್ ಅಂದರೆ ಸಾಕು ಮೈದಾನದ ಸುತ್ತ ಪ್ರೇಕ್ಷಕರಿಂದ ತುಂಬಿಕೊಳ್ಳುತ್ತವೆ. ಪ್ರೇಕ್ಷಕರಿದ್ದಲ್ಲಿ, ಮೈದಾನದ ಮೆರುಗು ಬೇರೆಯಾಗಿರುತ್ತದೆ. ಆಟಗಾರರನ್ನು ಹುರಿದುಂಬಿಸುವ ಜೊತೆಗೆ ಟಿವಿ ಮೂಲಕ ಪಂದ್ಯ ವೀಕ್ಷಿಸುವರಿಗೂ ಮನೋರಂಜನೆಯನ್ನು ಹೆಚ್ಚಿಸುತ್ತದೆ.
ಆದರೆ, ಈ ಸಲದ ಟೂರ್ನಿಗೆ ಕೊರೋನಾ ಕಾರಣದಿಂದಾಗಿ ಪ್ರೇಕ್ಷಕರಿಗೆ ಮೈದಾನಕ್ಕೆ ತೆರಳುವುದಕ್ಕೆ ಅವಕಾಶವಿಲ್ಲ. ಇದರಿಂದಾಗಿ ನಿರೀಕ್ಷೆಯಷ್ಟು ರೋಮಾಂಚನ ಸಿಗುವುದಿಲ್ಲ. ಆದರೆ, ಮೈದಾನದಲ್ಲಿರುವ ಆಟಗಾರರು ತಮ್ಮ ಅದ್ಬುತ ಪ್ರದರ್ಶನದ ಮೂಲಕವೇ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.
ಅರಬ್ ನಾಡಿನಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಕಳೆದ ಸಲ ಐಪಿಎಲ್ ಕೂಟ ಮುಕ್ತಾಯಗೊಳಿಸಿ ಪ್ರಶಸ್ತಿ ವಿಜೇತ ಮುಂಬೈ ಹಾಗೂ ರನರ್ ಅಪ್ ಆಗಿದ್ದ ಚೆನ್ನೈ ತಂಡಗಳು ಈ ಕೂಟಕ್ಕೆ ಚಾಲನೆ ನೀಡಿವೆ. ಮುಂದಿನ 52 ದಿನಗಳ ಕಾಲ ಪ್ರೇಕ್ಷಕರಿಲ್ಲದ ಖಾಲಿ ಮೈದಾನದಲ್ಲೇ ಪಂದ್ಯ ನಡೆಯಲಿದ್ದು, ಅರಬ್ ಅಂಗಳ ಯಾರಿಗೆ ವರವಾಗಲಿದೆ ಎನ್ನುವುದಕ್ಕೆ 52 ದಿನಗಳ ಬಳಿಕ ಉತ್ತರ ಸಿಗಲಿದೆ.