ಅಬುಧಾಬಿ, ಸೆ. 19 (DaijiworldNews/SM): ಕೊರೋನಾ ಅಡೆಗಳ ನಡುವೆ ಅರಬ್ ನಾಡಲ್ಲಿ ಆಯೋಜನೆಗೊಂಡಿದ್ದ ಹದಿಮೂರನೇ ಆವೃತ್ತಿಯ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಅಂಬಟಿ ರಾಯುಡ್ ಹಾಗೂ ಪಾಪ್ ಡು ಪ್ಲೆಸಿಸ್ ಅದ್ಭುತ ಪ್ರದರ್ಶನದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆದ್ದು ಬೀಗಿದೆ.
ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ರೋಹಿತ್ ನೇತೃತ್ವದ ಮುಂಬೈ ತಂಡ ಇಪ್ಪತ್ತು ಓವರ್ ಗಳಲ್ಲಿ ಒಂಬತ್ತು ವಿಕೆಟ್ ಗಳ ನಷ್ಟಕ್ಕೆ 162 ರನ್ ಗಳಿಸಿತು. ಮುಂಬೈ ಪರ ಸೌರಬ್ ತಿವಾರಿ 31 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 42 ರನ್ ಸಿಡಿಸಿದರು. ಆರಂಭಿಕ ಆಟಗಾರ ಡಿ ಕಾಕ್ 20 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ 33 ರನ್ ಸಿಡಿಸಿದರು. ಉಳಿದಂತೆ ನಾಯಕ ರೋಹಿತ್ ೧೨, ಸೂರ್ಯ ಕುಮಾರ್ ಯಾದವ್ 17, ಪೊಲಾರ್ಡ್ 18, ಹಾರ್ದಿಕ್ ಪಾಂಡ್ಯ 14, ಜೇಮ್ಸ್ ಪ್ಯಾಟಿನ್ ಸನ್ 11ರನ್ ಗಳನ್ನು ಸಿಡಿಸಿದರು.
ಇದಕ್ಕೆ ಉತ್ತರವಾಗಿ ಚೆನ್ನೈ ತಂಡಕ್ಕೆ ಆರಂಭಿಕ ಆಟಗಾರರು ನಿರಾಸೆ ಮೂಡಿಸಿದರು. ಮುರಳಿ ವಿಜಯ್ ಒಂದು ರನ್ ಗೆ ನಿರ್ಗಮಿಸಿದರೆ, ಶೇನ್ ವಾಟ್ಸನ್ 4ರನ್ ಗಳಿಗೆ ಫೆವಿಲಿಯನ್ ನತ್ತ ನಡೆದರು. ಬಳಿಕ ಅಂಬಟಿ ರಾಯುಡ್ ತಂಡಕ್ಕೆ ನೆರವಾದರು. 48 ಎಸೆತಗಳನ್ನು ಎದುರಿಸಿದ ರಾಯುಡು 6 ಬೌಂಡರಿಗಳು ಹಾಗೂ 3 ಸಿಕ್ಸರ್ ನೆರವಿನಿಂದ 71 ರನ್ ಸಿಡಿಸಿದರು. ಬಳಿಕ ಅರ್ಧ ಶತಕ ಸಿಡಿಸಿದ ಪಾಪ್ ಡು ಪ್ಲೆಸಿಸ್(58) ತಂಡದ ಮೊತ್ತ ಹೆಚ್ಚಳಕ್ಕೆ ನೆರವಾದರು.
ಇನ್ನು ಚೆನ್ನೈ ಪರ ಲುಂಗಿ ನಿಗಿಡಿ ಮೂರು ವಿಕೆಟ್ ಪಡೆದರೆ, ರವೀಂದ್ರ ಜಡೇಜಾ ಹಾಗೂ ಚಾಹರ್ ಎರಡು ವಿಕೆಟ್ ಪಡೆದರು.