ದುಬೈ, ಸೆ. 22 (DaijiworldNews/MB) : ಸೋಮವಾರ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ನಿರೀಕ್ಷೆಯಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ ರೈಸಸ್ ಹೈದರಾಬಾದ್ ತಂಡದ ವಿರುದ್ದ 10 ರನ್ ಗಳಿಂದ ಜಯಗಳಿಸಿದ್ದು, ಗೆಲುವಿನ ನಾಗಲೋಟ ಆರಂಭಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿ ಹೈದರಾಬಾದ್ಗೆ 164 ರನ್ ಗುರಿ ನೀಡಿತ್ತು.
ಆರ್ ಸಿಬಿ ಪರ ಆರಂಭಿಕರಾದ ದೇವದತ್ ಪಡಿಕ್ಕಲ್ 42 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ 56 ರನ್ ಗಳಿಸಿದರು. ಆರನ್ ಫಿಂಚ್ 27 ಎಸೆತಗಳನ್ನು ಎದಿರಿಸಿ 1 ಬೌಂಡರಿ 2 ಸಿಕ್ಸರ್ ಸಹಿತ 29 ರನ್ ಗಳಿಸಿದರು. ಇನ್ನು ನಾಯಕ ಕೊಹ್ಲಿ 13 ಎಸೆತಗಳನ್ನು ಎದುರಿಸಿ 14 ರನ್ ಗಳಿಗೆ ನಿರ್ಗಮಿಸಿ ನಿರಾಸೆ ಮೂಡಿಸಿದರು. ಇನ್ನು ಈ ನಡುವೆ ಆರ್ ಸಿ ಬಿ ತಂಡಕ್ಕೆ ನೆರವಾದುದು, ಎ ಬಿ ಡಿವಿಲಿಯರ್ಸ್. 30 ಎಸೆತಗಳನ್ನು ಎದುರಿಸಿದ 4 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ಸಹಿತ(51) ಅರ್ಧ ಶತಕ ಸಿಡಿಸಿ ಮಿಂಚಿದರು. ಅವರು ಸರಾಸರಿ ೧೭೦ರ ವೇಗದಲ್ಲಿ ಬ್ಯಾಟಿಂಗ್ ನಡೆಸಿದ್ದರು. ಇನ್ನು ಶಿವಂ ದುಬೆ ೭ ರನ್ ಗಳಿಸಿ ನಿರ್ಗಮಿಸಿದರು. ಹೈದ್ರಬಾದ್ ಪರ ನಟರಾಜನ್, ಅಭಿಷೇಕ್ ಶರ್ಮಾ, ವಿಜಯ ಶಂಕರ್ ತಲಾ ಒಂದೊಂದು ವಿಕೆಟ್ ಪಡೆದರು.
ಇನ್ನು ಈ ಗುರಿ ಬೆನ್ನತ್ತಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಆರ್ ಸಿ ಬಿಯ ಶಿಸ್ತುಬದ್ದ ಬೌಲಿಂಗ್ ಎದುರು ರನ್ ಕಲೆಹಾಕಲು ಪರದಾಡಿತು. 19. 4 ಓವರ್ ಗಳಲ್ಲಿ 153 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು. ಹೈದ್ರಬಾದ್ ಪರ ಡೇವಿಡ್ ವಾರ್ನರ್ 6ರನ್ ಗಳಿಸಿ ಅನಿರೀಕ್ಷಿತ ರನ್ ಔಟ್ ಗೆ ಗುರಿಯಾಗಿ ನಿರ್ಗಮಿಸಿದರು. ಬಳಿಕ ತಂಡಕ್ಕೆ ಜಾನಿ ಬೈಸ್ಟ್ರಾ ನೆರವಾದರು. 43 ಎಸೆತಗಳನ್ನು ಎದುರಿಸಿದ ಅವರು, ಆರ್ ಬೌಂಡರಿ ಹಾಗೂ ಎರಡು ಪ್ರಚಂಡ ಸಿಕ್ಸರ್ ಸಹಿತ 61 ರನ್ ಸಿಡಿಸಿದರು. ಇನ್ನು 33 ಎಸೆತ ಎದುರಿಸಿದ ಮನೀಶ್ ಪಾಂಡೆ 34 ರನ್, ಪ್ರಿಯಂ ಗರ್ಗ್ 12, ಅಭಿಷೇಕ್ ಶರ್ಮಾ 7 ರನ್, ರಶೀದ್ ಖಾನ್ 6, ಸಂದೀಪ್ ಶರ್ಮಾ 9, ನಟರಾಜನ್ 3 ರನ್ ಗಳಿಸಿದರು. ಉಳಿದಂತೆ ವಿಜಯ್ ಶಂಕರ್, ಭುವನೇಶ್ವರ್ ಕುಮಾರ್, ಮೈಕಲ್ ಮಾರ್ಶ್ ಬಂದಂತೆ ಫೆವೀಲಿಯನ್ ನತ್ತ ನಡೆದರು. ಅಂತಿಮವಾಗಿ ಹೈದ್ರಬಾದ್ ತಂಡ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು ಹತ್ತು ರನ್ ಗಳ ಅಂತರದ ಸೋಲನ್ನೊಪ್ಪಿಕೊಂಡಿತು.
ಆರ್ ಸಿಬಿ ಪರ ಯಜುವೇಂದ್ರ ಚಹಲ್ ಹದಿನೆಂಟು ರನ್ ನೀಡಿ ಮೂರು ವಿಕೆಟ್ ಪಡೆದರೆ, ನವದೀಪ್ ಹಾಗೂ ಶಿವಂ ದುಬೆ ತಲಾ ಎರಡು ವಿಕೆಟ್ ಪಡೆದರು.
ಆರ್ಸಿಬಿ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ ಯಜುವೇಂದ್ರ ಚಹಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.