ಅಬುಧಾಬಿ, ಸೆ. 25 (DaijiworldNews/SM): ಇಲ್ಲಿನ ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 44 ರನ್ ಗಳಿಂದ ಮಣಿಸಿದ ಡೆಲ್ಲಿ ಭರ್ಜರಿ ಗೆಲುವು ದಾಖಲಿಸಿಕೊಂಡಿದೆ.
ಇಂದಿನ ಗೆಲುವಿನ ಮೂಲಕ ಸತತ ಎರಡು ಪಂದ್ಯಗಳನ್ನು ಡೆಲ್ಲಿ ಗೆದ್ದಂತಾಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ ನಿಗಧಿತ ಇಪ್ಪತ್ತು ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು.
ಡೆಲ್ಲಿ ಕ್ಯಾಪಿಟಲ್ಸ್ ಪರ ಪೃಥ್ವಿ ಶಾ 43 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 64 ರನ್ ಸಿಡಿಸಿದರು. ಇನ್ನು 27 ಎಸೆತಗಳನ್ನು ಎದುರಿಸಿದ ಶಿಖರ್ ಧವನ್ 3 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 35 ರನ್ ಸಿಡಿಸಿದರು.
ಡೆಲ್ಲಿ ನೀಡಿದ ಗುರಿ ಬೆನ್ನತ್ತಿದ ಚೆನ್ನೈ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಾದ ಮುರಳಿ ವಿಜಯ್ 10, ಶೇನ್ ವಾಟ್ಸನ್ 14 ರನ್ ಗಳ ಅಲ್ಪ ಮೊತ್ತೆ ಪೇರಿಸಿ ಫೆವೀಲಿಯನ್ ಹಾದಿ ಹಿಡಿದರು. ಆದರೆ, ಫಾಫ್ ಡ್ಯುಪ್ಲೆಸಿಸ್ ಮತ್ತೊಮ್ಮೆ ತಂಡಕ್ಕೆ ನೆರವಾದರು. 43 ರನ್ ಗಳನ್ನು ಸಿಡಿಸಿ ತಂಡದ ಮೊತ್ತ ಹೆಚ್ಚಳಕ್ಕೆ ಕಾರಣರಾದರು. ಉಳಿದಂತೆ ಕೇದರ್ ಜಾದವ್ 26 ರನ್ ಸಿಡಿಸಿದ್ದು ಬಿಟ್ಟರೆ ಬೇರಾವುದೇ ಆಟಗಾರ ನಿರೀಕ್ಷೆಯ ಪ್ರದರ್ಶನ ನೀಡಲಿಲ್ಲ. ಅಂತಿಮವಾಗಿ 20 ಓವರ್ ಗಳಲ್ಲಿ ಚೆನ್ನೈ ತಂಡ ಏಳು ವಿಕೆಟ್ ಗಳ ನಷ್ಟಕ್ಕೆ 131ರನ್ ಗಳನ್ನು ಸಿಡಿಸಿ ಸೋಲಿಗೆ ಶರಣಾಯಿತು.
ಡೆಲ್ಲಿ ಪರ ಮಾರಕ ದಾಳಿ ನಡೆಸಿದ ರಬಾಡ ಮೂರು, ಆಂಡ್ರಿಚ್ ಎರಡು ವಿಕೆಟ್ ಗಳನ್ನು ಪಡೆದರು.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಡಿರುವ ಎರಡೂ ಪಂದ್ಯಗಳಲ್ಲೂ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.