ಸಿಡ್ನಿ, ಡಿ.06 (DaijiworldNews/PY): ಸಿಡ್ನಿಯಲ್ಲಿ ನಡೆದ ಭಾರತ ಆಸೀಸ್ ನಡುವಿನ ಎರಡನೇ ಟಿ-20 ಪಂದ್ಯಾಟದಲ್ಲಿ ಭಾರತ ತಂಡ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಕೊಹ್ಲಿ ಪಡೆಯ ಬೌಲರ್ಗಳನ್ನು ಆಸೀಸ್ ಆಟಗಾರರು ಬೆನ್ನಟ್ಟಿದ್ದು, ಪ್ರಾರಂಭದಿಂದಲೇ ಬಿರಿಸಿನ ಬ್ಯಾಟಿಂಗ್ ಪ್ರದರ್ಶನ ಮಾಡಿದರು.
ಆಸೀಸ್ ನಾಯಕ ಮ್ಯಾಥ್ಯೂ 58 ರನ್ ಹಾಗೂ ಸ್ಟೀವನ್ ಸ್ಮಿತ್ 46 ರನ್ಗಳ ನೆರವಿನಿಂದ ಆಸ್ಟ್ರೇಲಿಯಾ ಆಸ್ಟ್ರೇಲಿಯಾ 20 ಓವರ್ಗಳಲ್ಲಿ 194 ರನ್ ಬಾರಿಸಿತು.
ಆಸೀಸ್ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಟೀಂ ಇಂಡಿಯಾ ಸ್ಪೋಟಕ ಆರಂಭ ಪಡೆದುಕೊಂಡಿತು. ಶಿಖರ್ ಧವನ್ ಹಾಗೂ ಕೆ.ಎಲ್.ರಾಹುಲ್ ಬಿರುಸಿನ ಬ್ಯಾಟಿಂಗ್ ಮಾಡಿದರು. 5 ಓವರ್ ಆಗುವ ವೇಳೆ ಈ ಜೋಡಿ ತಂಡದ ಮೊತ್ತವನ್ನು 50ರ ಗಡಿ ದಾಟಿಸಿತು. ರಾಹುಲ್ 30 ರನ್ ಪಡೆದು ಔಟಾದರೆ, ಧವನ್ 52 ರನ್ ಗಳಿಸಿ ಔಟ್ ಆದರು. ನಂತರ ಬಂದ ನಾಯಕ ಕೊಹ್ಲಿ ಕೇವಲ 24 ಎಸೆತಗಳಲ್ಲಿ ತಲಾ 2 ಬೌಂಡರಿ, ಸಿಕ್ಸರ್ ಸಿಡಿಸಿ 40 ರನ್ಗೆ ಔಟ್ ಆದರು.
ಕೊನೆಯ ನಾಲ್ಕು ಓವರ್ಗಳಲ್ಲಿ ಜೊತೆಯಾಟವಾಡಿದ ಹಾರ್ದಿಕ್ ಪಾಂಡ್ಯ ಹಾಗೂ ಶ್ರೇಯಸ್ ಅಯ್ಯರ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಅಂತಿಮವಾಗಿ ಟೀಂ ಇಂಡಿಯಾದ ಗೆಲುವಿಗೆ ಆರು ಎಸೆತಗಳಿಗೆ 14 ರನ್ಗಳ ಅವಶ್ಯಕತೆ ಇದ್ದು, ಪಾಂಡ್ಯ 2ನೇ ಮತ್ತು 3ನೇ ಎಸೆತಗಳಲ್ಲಿ ಸಿಕ್ಸರ್ ಸಿಡಿಸಿ ಪಂದ್ಯ ಗೆಲ್ಲಿಸಿಕೊಟ್ಟರು. ಅಲ್ಲದೆ 22 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 3 ಬೌಂಡರಿಗಳೊಂದಿಗೆ 44 ರನ್ ಸಿಡಿಸಿದ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾಕ್ಕೆ ಗೆಲುವು ತಂದುಕೊಟ್ಟರು.
ಈ ಭರ್ಜರಿ ಜಯದೊಂದಿಗೆ ಭಾರತ ತಂಡ 2-0 ಅಂತರದೊಂದಿಗೆ ಟಿ20 ಸರಣಿಯನ್ನು ವಶಪಡಿಸಿಕೊಂಡಿತು.