ಮೆಲ್ಬರ್ನ್, ಡಿ. 29 (DaijiworldNews/MB) : ಇಲ್ಲಿನ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್ನಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ದ ಎಂಟು ವಿಕೆಟ್ಗಳ ಜಯ ಸಾಧಿಸಿದೆ. ಇದರೊಂದಿಗೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1ರ ಅಂತರದ ಸಮಬಲ ಸಾಧಿಸಿದೆ.
ಈ ಮೊದಲು ಆಸ್ಟ್ರೇಲಿಯಾದ 195 ರನ್ಗಳಿಗೆ ಪ್ರತಿಯಾಗಿ ಭಾರತ ತಂಡದ ನಾಯಕ ಅಜಿಂಕ್ಯ ರಹಾನೆ ಆಕರ್ಷಕ ಶತಕ (112) ಹಾಗೂ ರವೀಂದ್ರ ಜಡೇಜ ಅರ್ಧಶತಕದ (57) ಬೆಂಬಲದೊಂದಿಗೆ ಭಾರತವು 326 ರನ್ ಪೇರಿಸಿತ್ತು. ಈ ಮೂಲಕ 131 ರನ್ಗಳ ಭಾರೀ ಮುನ್ನಡೆ ಸಾಧಿಸಿತ್ತು.
ಬಳಿಕ ದ್ವಿತೀಯ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 200 ರನ್ ಪಡೆದು ಆಲೌಟ್ ಆಗಿತ್ತು. ಭಾರತದ ಗೆಲುವಿಗಾಗಿ 70 ರನ್ ಗಳಿಸಬೇಕಾದ ಅಗತ್ಯವಿತ್ತು. ಈಗ ಭಾರತವು 15.5 ಓವರ್ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಈ ಗುರಿ ಮುಟ್ಟುವ ಮೂಲಕ ಗೆಲುವು ದಾಖಲಿಸಿದೆ.
ಮಯಂಕ್ ಅಗರವಾಲ್ (5) ಹಾಗೂ ಚೇತೇಶ್ವರ ಪೂಜಾರ (3) ಪಡೆದಿದ್ದು 19 ರನ್ ಗಳಿಸುವಷ್ಟರಲ್ಲಿ ಭಾರತ ಎರಡು ವಿಕೆಟ್ ಕಳೆದುಕೊಂಡಿತ್ತು. ಆದರೆ ಬಳಿಕ ರನ್ ಬಾರಿಸಿದ ಶುಭಮನ್ ಗಿಲ್ (35) ಹಾಗೂ ನಾಯಕ ಅಜಿಂಕ್ಯ ರಹಾನೆ (27) 51 ರನ್ಗಳ ಜೊತೆಯಾಟವಾಡಿ ಭಾರತ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದಾರೆ.