ಸಿಡ್ನಿ, ಜ.04 (DaijiworldNews/PY): ಕಠಿಣ ಕ್ವಾರಂಟೈನ್ ನಿರ್ಬಂಧಗಳು ಜಾರಿಯಲ್ಲಿರುವ ಕಾರಣ ಬ್ರಿಸ್ಬೇನ್ನಲ್ಲಿ ಆಡಲು ಟೀಂ ಇಂಡಿಯಾ ಹಿಂಜರಿಯುತ್ತಿದೆ ಎನ್ನುವ ವರದಿಗಳನ್ನು ಸೋಮವಾರ ಕ್ರಿಕೆಟ್ ಮುಖ್ಯ ನಿರ್ವಾಹಕ ನಿಕ್ ಹಾಕ್ಲಿ ಅವರು ತಳ್ಳಿ ಹಾಕಿದ್ದಾರೆ.
"ಕ್ವೀನ್ಸ್ಲ್ಯಾಂಡ್ಸ್ನ ಕ್ವಾರಂಟೈನ್ ಅವಶ್ಯಕತೆಗಳ ವಿಚಾರದ ಬಗ್ಗೆ ಬಿಸಿಸಿಐನ ಬೆಂಬಲ ಹಾಗೂ ಸಹಮತವಿದೆ. ಅಲ್ಲದೇ, ಈ ವಿಚಾರವಾಗಿ ಬಿಸಿಸಿಐನ ನಮ್ಮ ಸಹವರ್ತಿಗಳ ಜೊತೆ ನಾವು ಸಂಪರ್ಕದಲ್ಲಿದ್ದೇವೆ" ಎಂದು ತಿಳಿಸಿದ್ದಾರೆ.
ನಾಲ್ಕು ಟೆಸ್ಟ್ ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯ ಮೂರನೇ ಟೆಸ್ಟ್ ಪಂದ್ಯವು ಸಿಡ್ನಿಯಲ್ಲಿ ಗುರುವಾರ ಪ್ರಾರಂಭವಾಗಲಿದೆ. ಸರಣಿಯಲ್ಲಿ ಎರಡು ತಂಡಗಳು 1-1ರಲ್ಲಿ ಸಮಬಲ ಹೊಂದಿವೆ. ಜ.15ರಂದು ಗಾಬಾದಲ್ಲಿ ಸರಣಿಯ ಅಂತಿಮ ಟೆಸ್ಟ್ ಪಂದ್ಯ ನಡೆಯಲಿದೆ.
ಮೆಲ್ಬರ್ನ್ನ ರೆಸ್ಟೋರೆಂಟ್ ಭಾರತೀಯ ಆಟಗಾರರಾದ ರೋಹಿತ್ ಶರ್ಮಾ, ರಿಷಭ್ ಪಂತ್, ಶುಭ್ಮನ್ ಗಿಲ್, ನವದೀಪ್ ಸೈನಿ ಹಾಗೂ ಪೃಥ್ವಿ ಶಾ ತೆರಳಿದ್ದರು. ಈ ಹಿನ್ನೆಲೆ ಟೀಂ ಇಂಡಿಯಾದ ಆಟಗಾರರು ಕೊರೊನಾ ಶಿಷ್ಟಾಚಾರಗಳನ್ನು ಉಲ್ಲಂಘಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಅಲ್ಲದೇ ಈ ಐವರು ಆಟಗಾರರನ್ನು ಪ್ರತ್ಯೇಕವಾಸ ಇರಲು ಸೂಚನೆ ನೀಡಲಾಗಿತ್ತು.
ಟೀಂ ಇಂಡಿಯಾ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗಳು ಜ.3ರಂದು ಕೊರೊನಾ ಆರೋಗ್ಯ ತಪಾಸಣೆಗೆ ಒಳಗಾಗಿದ್ದರು. ಇದೀಗ ಎಲ್ಲರೂ ಕೂಡಾ ಜೊತೆಯಾಗಿ ಸಿಡ್ನಿಗೆ ಪ್ರಯಾಣ ಬೆಳೆಸಲಿದ್ದಾರೆ.