ಸಿಡ್ನಿ, ಜ. 09 (DaijiworldNews/SM): ಭಾರತದ ವಿರುದ್ಧದ 3ನೇ ಟೆಸ್ಟ್ ಪಂದ್ಯದ 3ನೇ ದಿನದಾಟ ಅಂತ್ಯಗೊಂಡಿದ್ದು, ಆಸಿಸ್ ತಂಡ 197 ರನ್ ಗಳ ಮುನ್ನಡೆ ಸಾಧಿಸಿದೆ.
2ನೇ ಇನ್ನಿಂಗ್ಸ್ ಆರಂಭಿಸಿದ್ದ ಆಸ್ಚ್ರೇಲಿಯಾ ತಂಡ 2 ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿದೆ. ಆ ಮೂಲಕ 2ನೇ ಇನ್ನಿಂಗ್ಸ್ ನಲ್ಲಿ ಒಟ್ಟು 197 ರನ್ ಗಳ ಮುನ್ನಡೆ ಕಾಯ್ದುಕೊಂಡಿದೆ.
ಭಾರತ ತಂಡವನ್ನು 244 ರನ್ ಗಳಿಗೆ ಕಟ್ಟಿಹಾಕಿದ ಆಸಿಸ್ 2ನೇ ಇನ್ನಂಗ್ಸ್ ಆರಂಭಿಸಿತು. ಆರಂಭಿಕರಾದ ಡೇವಿಡ್ ವಾರ್ನರ್ ಮತ್ತು ವಿಲ್ ಫುಕೊವ್ಸ್ಕಿ ಉತ್ತಮ ಆರಂಭ ನೀಡುವಲ್ಲಿ ಎಡವಿದರು. 10 ರನ್ ಗಳಿಸಿದ್ದ ಫುಕೊವ್ಸ್ಕಿ ಸಿರಾಜ್ ಬೌಲಿಂಗ್ ನಲ್ಲಿ ವಿಕೆಟ್ ಕೀಪರ್ ಸಹಾಗೆ ಕ್ಯಾಚ್ ನೀಡಿ ಔಟ್ ಆದರು. ಬಳಿಕ 13 ರನ್ ಗಳಿಸಿದ್ದ ಡೇವಿಡ್ ವಾರ್ನರ್ ಕೂಡ ಅಶ್ವಿನ್ ಬೌಲಿಂಗ್ ನಲ್ಲಿ ಎಲ್ ಬಿ ಬಲೆಗೆ ಬಿದ್ದರು.
ಬಳಿಕ ಜೊತೆಯಾದ ಲಾಬುಶ್ಚಾಘ್ನೆ ಮತ್ತು ಸ್ಟೀವೆನ್ ಸ್ಮಿತ್ ಜೋಡಿ ಆಸ್ಟ್ರೇಲಿಯಾಗೆ ಯಾವುದೇ ಆಘಾತ ಎದುರಾಗದಂತೆ ನೋಡಿಕೊಂಡರು. ದಿನದಾಟದ ಅಂತ್ಯದ ವೇಳೆಗೆ ಲಾಬುಶ್ಚಾಘ್ನೆ ಅಜೇಯ 47ರನ್ ಗಳಿಸಿದ್ದು, ಸ್ಮಿತ್ 29 ರನ್ ಗಳಿಸಿ ನಾಲ್ಕನೇ ದಿನಕ್ಕೆ ಆಟ ಮುಂದುವರೆಸಲಿದ್ದಾರೆ.