ಸಿಡ್ನಿ, ಜ 11 (DaijiworldNews/SM): ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿದೆ. ಟೀಂ ಇಂಡಿಯಾ ಆಟಗಾರರಾದ ಹನುಮ ವಿಹಾರಿ ಮತ್ತು ಆರ್ ಅಶ್ವಿನ್ ಅವರ ಸಮಯೋಚಿತ ಆಟದಿಂದಾಗಿ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.
ವಿಹಾರಿ ಮತ್ತು ಆರ್ ಅಶ್ವಿನ್ ಅವರ ಪ್ರದರ್ಶನದಿಂದಾಗಿ ತಂಡ ಸೋಲಿನ ದವಡೆಯಿಂದ ತಪ್ಪಿಸಿಕೊಂಡಿತು. ಹಾಗೂ ಮೂರನೇ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು. ಆಸ್ಟ್ರೇಲಿಯಾ ನೀಡಿದ 407 ರನ್ ಗಳ ಗುರಿಯನ್ನು ಬೆನ್ನತ್ತಿದ ಟೀಂ ಇಂಡಿಯಾಕ್ಕೆ ಆಸಿಸ್ ಸವಾಲಾಗಿ ಕಾಡಿತು. ಟೀಂ ಇಂಡಿಯಾ ಐದನೇ ದಿನದಾಟದಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 334 ರನ್ ಗಳಿಸಿದ್ದು ಆ ಮೂಲಕ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು.
ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ 98/2 ಗಳಿಸಿತ್ತು. ಆದರೆ ಅಂತಿಮ ದಿನದಾಟದ ಆರಂಭದಲ್ಲೇ ಟಿಂ ಇಂಡಿಯಾಕ್ಕೆ ಆಘಾತ ಎದುರಾಯಿತು. ಕೇವಲ 4 ರನ್ ಗಳಿಸಿದ್ದ ರಹಾನೆ ಔಟಾಗಿ ಮರಳಿದರು. ಈ ವೇಳೆ ಪೂಜಾರ ಜೊತೆಗೂಡಿದ ಪಂತ್ ಸಮಯೋಚಿತ ಬ್ಯಾಟಿಂಗ್ ಮೂಲಕ ಭಾರತ ತಂಡದ ಮೊತ್ತ ಹೆಚ್ಚಳಕ್ಕೆ ಕಾರಣರಾದರು. ಈ ಜೋಡಿ ಭೋಜನ ವಿರಾಮದ ವೇಳೆ 104 ರನ್ ಗಳ ಶತಕದ ಜೊತೆಯಾಟವಾಡಿತು.
ನಂತರ ರಿಷಬ್ ಪಂತ್ ಶತಕದ ಅಂಚಿನಲ್ಲಿ ಎಡವಿದ್ದು 97 ರನ್ ಗಳಿಗೆ ಔಟ್ ಆದರು. ಪೂಜಾರ ಸಹ 77 ರನ್ ಗಳಿಗೆ ಔಟಾಗಿದ್ದು ಇದಾದ ಬಳಿಕ ತಂಡದ ಗೆಲುವಿನ ಕನಸು ಕ್ಷೀಣಿಸಿತು. ಕಡಿಮೆ ಓವರ್ ಗಳಲ್ಲಿ ಹೆಚ್ಚು ರನ್ ಪಡೆಯಬೇಕಿದ್ದರಿಂದ ಹನುಮ ವಿಹಾರಿ ಮತ್ತು ಆರ್ ಅಶ್ವಿನ್ ತಾಳ್ಮೆಯ ಆಟವಾಡಿ ತಂಡವನ್ನು ಸೋಲಿನ ದವಡೆಯಿಂದ ತಪ್ಪಿಸಿದರು.