ಸ್ಬೇನ್, ಜ 14 (DaijiworldNews/SM): ಮೂರನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡ ಬಳಿಕ ಭಾರತ ಹಾಗೂ ಆಸ್ಟ್ರೇಲಿಯಾ ತಂಡ ಇದೀಗ ನಾಲ್ಕನೇ ಪಂದ್ಯಕ್ಕೆ ಎದುರು ನೋಡುತ್ತಿದೆ. ಬ್ರಿಸ್ಬೇನ್ ಅಂಗಳದಲ್ಲಿ ಪಂದ್ಯಕ್ಕೆ ಸಕಲ ಸಿದ್ಧತೆಗಳು ನಡೆದಿವೆ. ಆದರೆ, ಉಭಯ ತಂಡಗಳಲ್ಲಿ ಗಾಯಾಳುಗಳ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ.
ಭಾರತ ತಂಡದಲ್ಲಿ ಆರಂಭಿಕ ರೋಹಿತ್ ಶರ್ಮಾ(ಮೊದಲ ಎರಡು ಟೆಸ್ಟ್) ಮತ್ತು ವೇಗದ ಬೌಲರ್ ಇಶಾಂತ್ ಶರ್ಮಾ(ಇಡೀ ಸರಣಿಯಿಂದ) ಇಲ್ಲದೆ ಭಾರತ ತಂಡ ಆಸ್ಟ್ರೇಲಿಯಾಕ್ಕೆ ಆಗಮಿಸಿತ್ತು.
ಭಾರತ ತಂಡದಲ್ಲಿ ಹೆಚ್ಚಿದ ಗಾಯಾಳುಗಳ ಸಂಖ್ಯೆ:
ಐಪಿಎಲ್ನಲ್ಲಿ ಇಬ್ಬರೂ ಆಟಗಾರರು ಗಾಯಗೊಂಡಿದ್ದರು. ಅಡಿಲೇಡ್ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ವೇಗದ ಬೌಲರ್ ಮೊಹಮ್ಮದ್ ಶಮಿ ಗಾಯಗೊಂಡರೆ, ಎರಡನೇ ವೇಗದ ಬೌಲರ್ ಉಮೇಶ್ ಯಾದವ್ ಮೆಲ್ಬೋರ್ನ್ನಲ್ಲಿ ನಡೆದ ಎರಡನೇ ಟೆಸ್ಟ್ನಲ್ಲಿ ಗಾಯಗೊಂಡಿದ್ದಾರೆ. ಇದರಿಂದಾಗಿ ಇಬ್ಬರು ವೇಗಿಗಳು ಸರಣಿಯಿಂದ ಹೊರಗುಳಿದಿದ್ದಾರೆ. ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್ನಲ್ಲಿ ಎಡಗೈ ಸ್ಪಿನ್ ಆಲ್ರೌಂಡರ್ ರವೀಂದ್ರ ಜಡೇಜಾ ಅವರ ಎಡಗೈ ಹೆಬ್ಬೆರಳು ಮುರಿದ್ದು, ಅವರು ಕೂಡ ಮುಂದಿನ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಇನ್ನು ಮೂರನೇ ಟೆಸ್ಟ್ನಲ್ಲಿ ತಂಡದ ಅಗ್ರ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಹೊಟ್ಟೆನೋವಿನಿಂದ ಬಳಲುತ್ತಿದ್ದರು ಮತ್ತು ಬ್ರಿಸ್ಬೇನ್ನಲ್ಲಿ ನಡೆಯುವ ನಾಲ್ಕನೇ ಮತ್ತು ಅಂತಿಮ ಟೆಸ್ಟ್ನಿಂದ ಹೊರಗುಳಿದರು.
ಇನ್ನು ಆಸಿಸ್ ಪರ ವಿಲ್ ಪುಕೋಸ್ಕಿ ಗುರುವಾರ ನಡೆದ ಫಿಟ್ನೆಸ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ. ಹೀಗಾಗಿ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯಕ್ಕೆ ಅವರು ಲಭ್ಯವಿರುವುದಿಲ್ಲ. ವಿಲ್ ಪುಕೋಸ್ಕಿ ಸ್ಥಾನಕ್ಕೆ ಮಾರ್ಕಸ್ ಹ್ಯಾರಿಸ್ ಬ್ಯಾಟಿಂಗ್ ಮಾಡಲಿದ್ದಾರೆ. ಭುಜದ ನೋವಿಗೆ ಸಿಲುಕಿರುವ ಹಿನ್ನೆಲೆ ವಿಲ್ ಪುಕೋಸ್ಕಿ ಟೂರ್ನಿಗೆ ಅಲಭ್ಯರಾಗಲಿದ್ದಾರೆ. ಆರಂಭಿಕ ಆಟಗಾರ ವಿಲ್ ಪುಕೋಸ್ಕಿ ಅಲಭ್ಯತೆ ಆಸಿಸ್ ತಂಡದಲ್ಲಿ ಎದ್ದು ಕಾಣಲಿದೆ