ಮುಂಬಯಿ, ಜ.15 (DaijiworldNews/HR): ಹಿತಾಸಕ್ತಿ ಸಂಘರ್ಷದ ಹಿನ್ನಲೆಯಲ್ಲಿ ಬಿಸಿಸಿಐ ಉಪಾಧ್ಯಕ್ಷರಾಗಿ ಹೊಸದಾಗಿ ಆಯ್ಕೆಯಾಗಿರುವ ರಾಜೀವ್ ಶುಕ್ಲಾ ಅವರಿಗೆ ಬಿಸಿಸಿಐ ನೈತಿಕ ಸಮಿತಿ ಅಧಿಕಾರಿ ಡಿ ಕೆ ಜೈನ್ ನೋಟಿಸ್ ಜಾರಿ ಮಾಡಿದ್ದು, ನೋಟಿಸ್ಗೆ ಉತ್ತರಿಸಲು ಎರಡು ವಾರಗಳ ಸಮಯಾವಕಾಶವನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.
ಮಧ್ಯ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ನ ಮಾಜಿ ಸದಸ್ಯ ಸಂಜೀವ್ ಗುಪ್ತಾ ಎಂಬವರು ರಾಜೀವ್ ಶುಕ್ಲಾ ವಿರುದ್ಧ ಹಿತಾಸಕ್ತಿ ಸಂಘರ್ಷದ ಬಗ್ಗೆ ದೂರು ನೀಡಿದ್ದು, ಅದೇ ಸಮಯದಲ್ಲಿ ಬಿಸಿಸಿಐ ಉಪಾಧ್ಯಕ್ಷರಾಗಿರುವುದನ್ನು ಆಕ್ಷೇಪಿಸಿ ಅರ್ಜಿ ಸಲ್ಲಿಸಿದ್ದರು.
ಇನ್ನು ಬಿಸಿಸಿಐ ನೀತಿ ಮತ್ತು ನಿಯಮಕ್ಕೆ ಅನುಸಾರ ಹೊಸ ಉಪಾಧ್ಯಕ್ಷರ ನೇಮಕವನ್ನು ಪ್ರಶ್ನಿಸಲಾಗಿರುವುದರಿಂದ, ನೈತಿಕ ಸಮಿತಿ ಅಧಿಕಾರಿ ಶುಕ್ಲಾಗೆ ನೋಟಿಸ್ ಜಾರಿಮಾಡಿದ್ದಾರೆ.
ಬಿಸಿಸಿಸಿ ಪ್ರಕಾರ ಓರ್ವ ವ್ಯಕ್ತಿ, ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚಿನ ಹುದ್ದೆಗಳನ್ನು ಹೊಂದುವಂತಿಲ್ಲ ಎನ್ನಲಾಗಿದ್ದು, ಬಿಸಿಸಿಐ ನೋಟಿಸ್ ಕುರಿತಂತೆ ಶುಕ್ಲಾ ಯಾವುದೇ ಹೇಳಿಕೆ ನೀಡಿಲ್ಲ ಎಂದು ವರದಿಯಾಗಿದೆ.