ನವದೆಹಲಿ, ಜ 20(DaijiworldNews/SM): ಹದಿಮೂರನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರನಡೆದಿದ್ದ ಹರ್ಭಜನ್ ಸಿಂಗ್ ಅಭಿಮಾನಿಗಳಲ್ಲಿ ನಿರಾಸೆ ಮೂದಿಸಿದ್ದರು. ಆದರೆ, ಇದೀಗ ಐಪಿಎಲ್ ಫ್ರ್ಯಾಂಚೈಸ್ ಚೆನ್ನೈ ಸೂಪರ್ ಕಿಂಗ್ಸ್ ಜೊತೆಗಿನ ಎರಡು ವರ್ಷಗಳ ಒಪ್ಪಂದ ಮುಕ್ತಾಯಗೊಂಡಿದೆ ಎಂದು ಹರ್ಭಜನ್ ಸಿಂಗ್ ಘೋಷಿಸಿದ್ದಾರೆ.
ಮುಂದಿನ ಐಪಿಎಲ್ ಹರಾಜಿಗೆ ಮುಂಚಿತವಾಗಿ ಈ ವಿಚಾರ ಬಹಿರಂಗಪಡಿಸಿದ್ದು, ಆ ಮೂಲಕ ಚೆನ್ನೈ ಬಿಟ್ಟು ಬೇರೆ ತಂಡದತ್ತ ಒಲವು ಹೊಂದಿದ್ದಾರೆ ಎಂಬುವುದನ್ನು ಒಂದು ಹಂತದಲ್ಲಿ ಸ್ಪಷ್ಟಪಡಿಸಿದಂತಾಗಿದೆ. ಇನ್ನು ಒಪ್ಪಂದ ಮುಗಿದಿರುವ ಬಗ್ಗೆ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದು, "ಚೆನ್ನೈ ತಂಡದೊಡನೆ ನನ್ನ ಒಪ್ಪಂದವು ಮುಕ್ತಾಯಗೊಂಡಿದೆ. ಈ ತಂಡಕ್ಕಾಗಿ ಆಡಿದ್ದ ಅನುಭವ ಉತ್ತಮವಾಗಿತ್ತು. ಉತ್ತಮ ಸ್ನೇಹಿತರನ್ನು ನಾನು ಸಂಪಾದಿಸಿದ್ದೇನೆ ಎಂದು ಬರೆದಿದ್ದಾರೆ. ಅಲ್ಲದೆ ತಂಡದಲ್ಲಿದ್ದ ಸಂದರ್ಭ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
ಹರ್ಭಜನ್ ಸಿಂಗ್ 2018 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಗೆದ್ದಚೆನ್ನೈ ಸೂಪರ್ ಕಿಂಗ್ಸ್ ತಂಡದ ಸದಸ್ಯರಾಗಿದ್ದರು. 2019 ರ ಕ್ರಿಕೆಟ್ ಋತುವಿನಲ್ಲಿ ಹರ್ಭಜನ್ 11 ಪಂದ್ಯಗಳಿಂದ 19.5 ಸರಾಸರಿಯಲ್ಲಿ 16 ವಿಕೆಟ್ಗಳನ್ನು ಪಡೆದಿದ್ದಾರೆ.