ಕೊಲಂಬೋ, ಜ.21 (DaijiworldNews/PY): ಫ್ರ್ಯಾಂಚೈಸ್ ಕ್ರಿಕೆಟ್ನಿಂದ ಶ್ರೀಲಂಕಾ ಕ್ರಿಕೆಟಿಗ ಲಸಿತ್ ಮಾಲಿಂಗ ನಿವೃತ್ತರಾಗಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ಪ್ರಕಟಿಸಿದೆ.
ಶ್ರೀಲಂಕಾದ ವೇಗದ ಬೌಲರ್ ಈ ತಿಂಗಳ ಪ್ರಾರಂಭದಲ್ಲಿ ಮುಂಬೈ ಇಂಡಿಯನ್ಸ್ಗೆ ತನ್ನ ತೀರ್ಮಾನವನ್ನು ತಿಳಿಸಿದ್ದರು.
"ನನ್ನ ಕುಟುಂಬದೊಂದಿಗೆ ಚರ್ಚಿಸಿದ ಬಳಿಕ ಎಲ್ಲಾ ಫ್ರ್ಯಾಂಚೈಸ್ ಕ್ರಿಕೆಟ್ನಿಂದ ನಿವೃತ್ತಿಹೊಂದಲು ಇದು ಸರಿಯಾದ ಸಮಯ ಎಂದು ನಾನು ಭಾವಿಸಿದ್ದೇನೆ. ಕೊರೊನಾ ಪರಿಸ್ಥತಿ ಹಾಗೂ ಪ್ರಯಾಣದ ಮೇಲಿನ ನಿರ್ಬಂಧಗಳು ನನ್ನ ವೈಯುಕ್ತಿಕ ಪರಿಸ್ಥಿತಿಯ ಬಗ್ಗೆ ಗಮನವಹಿಸಿದರೆ ನನಗೆ ಮುಂದಿನ ವರ್ಷ ಫ್ರ್ಯಾಂಚೈಸ್ ಕ್ರಿಕೆಟ್ನಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳಲು ಕಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ನಾನೂ ಈ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ" ಎಂದು ತಿಳಿಸಿದ್ದಾರೆ.
"ಇದೇ ವಿಚಾರವಾಗಿ ನಾನು ಇತ್ತೀಚಿನ ದಿನಗಳಲ್ಲಿ ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ಜೊತೆ ಚರ್ಚೆ ನಡೆಸಿದ್ದೆ. ಈ ಬಗ್ಗೆ ಅವರು ಬಹಳ ಬೆಂಬಲ ಹಾಗೂ ತಿಳುವಳಿಯನ್ನು ನೀಡಿದರು. ಅಂಬಾನಿ ಕುಟುಂಬಕ್ಕೆ ಹಾಗೂ ಮುಂಬೈ ಇಂಡಿಯನ್ಸ್ ಫ್ರ್ಯಾಂಚೈಸ್ನಲ್ಲಿರುವ ಎಲ್ಲರಿಗೂ ನನ್ನ ಧನ್ಯವಾದಗಳು. 12 ವರ್ಷಗಳಿಂದ ಅದ್ಭುತವಾದ ಅವಕಾಶ ಕಲ್ಪಿಸಿದ ನಿಮಗೆ ಕೃತಜ್ಞತೆಗಳು" ಎಂದಿದ್ದಾರೆ.
"ನನ್ನನ್ನು ಮುಂಬೈ ಇಂಡಿಯನ್ಸ್ ತಂಡವು ಕುಟುಂಬದವರಂತೆ ನೋಡಿಕೊಂಡಿದೆ. ನನಗೆ ಬೆಂಬಲ ನೀಡಿದ್ದಾರೆ. ಇಲ್ಲಿ ನನಗೆ ಸಾಕಷ್ಟು ನೆನಪುಗಳನ್ನು ಸಂಗ್ರಹಿಸಿದ್ದೇನೆ. ನೀತಾ ಅಂಬಾನಿ, ಮಹೇಲಾ ಜಯವರ್ಧನೆ, ಆಕಾಶ್ ಅಂಬಾನಿ ಹಾಗೂ ಮುಂಬೈ ಇಂಡಿಯನ್ಸ್ ಕುಟುಂಬಕ್ಕೆ ನಾನು ಶುಭಹಾರೈಸುತ್ತೇನೆ" ಎಂದು ತಿಳಿಸಿದ್ದಾರೆ.
"ಲಸಿತ್ ಮಾಲಿಂಗ ಅವರು 12 ವರ್ಷಗಳಿಂದ ಮುಂಬೈ ಇಂಡಿಯನ್ಸ್ನ ತಂಡದಲ್ಲಿದ್ದಾರೆ. ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ, ಇನ್ನೂ 5 ವರ್ಷಗಳ ಕಾಲ ಅವರನ್ನು ನಮ್ಮ ತಂಡದಲ್ಲಿ ಕಾಣಲು ಇಷ್ಟಪಡುತ್ತಿದ್ದೆ" ಎಂದು ಆಕಾಶ್ ಅಂಬಾನಿ ಹೇಳಿದ್ದಾರೆ.