ನವದೆಹಲಿ, ಫೆ.06 (DaijiworldNews/PY): ಚೆನ್ನೈಯಲ್ಲಿ ಫೆ.18ರಂದು ನಡೆಯಲಿರುವ 2021ರ ಐಪಿಎಲ್ ಹರಾಜಿನಲ್ಲಿ ಸುಮಾರು 1,097 ಮಂದಿ ಕ್ರಿಕೆಟಿಗರು ಕಾಣಿಸಿಕೊಳ್ಳಲಿದ್ದು, ಈ ಪೈಕಿ ಭಾರತದ 814 ಹಾಗೂ ವಿದೇಶದ 283 ಆಟಗಾರರಿದ್ದಾರೆ.
ಇನ್ನು ವಿದೇಶಿಗರ ಪೈಕಿ ವೆಸ್ಟ್ ಇಂಡೀಸ್ ಕ್ರಿಕೆಟಿಗರೇ ಹೆಚ್ಚು. ಇಲ್ಲಿನ 56 ಮಂದಿ ಆಟಗಾರರು ಹರಾಜು ವ್ಯಾಪ್ತಿಯಲ್ಲಿದ್ದಾರೆ. ನಂತರದ (42) ಸ್ಥಾನ ಆಸ್ಟ್ರೇಲಿಯಾಕ್ಕೆ ಸಲ್ಲುತ್ತದೆ. ಇನ್ನುಳಿದಂತೆ ದಕ್ಷಿಣ ಆಫ್ರಿಕಾದ 38, ಶ್ರೀಲಂಕಾದ 31, ನ್ಯೂಜಿಲ್ಯಾಂಡ್ನ 29 ಹಾಗೂ ಇಂಗ್ಲೆಂಡಿನ 21 ಮಂದಿ ಆಟಗಾರರಿದ್ದಾರೆ.
ಈ ಆಟಗಾರರನ್ನು ಹೊರತುಪಡಿಸಿದರೆ ಯುಎಇಯ 9, ನೇಪಾಳದ 8, ಸ್ಕಾಟ್ಲೆಂಡಿನ 7 ಹಾಗೂ ಬಾಂಗ್ಲಾದೇಶದ 5 ಮಂದಿ ಕ್ರಿಕೆಟಿಗರು ಐಪಿಎಲ್ನ ಅದೃಷ್ಟ ಪರೀಕ್ಷೆಯಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೇ, ಯುಎಸ್ಎ ಸೇರಿದಂತೆ ಐರ್ಲೆಂಡ್ ಹಾಗೂ ಜಿಂಬಾಬ್ವೆಯ ಆಟಗಾರರೂ ಕೂಡಾ ಇದ್ದಾರೆ.
ಎಲ್ಲಾ ಫ್ರಾಂಚೈಸಿಗಳು ಗರಿಷ್ಠ 25 ಆಟಗಾರರನ್ನು ಹೊಂದಿರಲಿದ್ದಾರೆ. ಆಗ ಹರಾಜಿನಲ್ಲಿ 61 ಆಟಗಾರರು ಮಾತ್ರವೇ ಮಾರಾಟವಾಗಲಿದ್ದಾರೆ. ಈ ಪೈಕಿ 22 ಮಂದಿ ವಿದೇಶಿ ಆಟಗಾರರು ಎಂದು ಬಿಸಿಸಿಐ ಪತ್ರಿಕಾ ಪ್ರಕಟಣೆ ಹೇಳಿದೆ.