ಚೆನ್ನೈ, ಫೆ.13 (DaijiworldNews/PY): ಚೆನ್ನೈಯಲ್ಲಿ ಮುಂದಿನ ಗುರುವಾರ ನಡೆಯಲಿರುವ ಐಪಿಎಲ್ ಹರಾಜು ಪ್ರಕ್ರಿಯೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಎಂಟು ಫ್ರಾಂಚೈಸಿಗಳು ತಮ್ಮ ಯಾದಿಗಳನ್ನು ನೀಡಿದ ನಂತರ ಆಟಗಾರರ ಸಂಖ್ಯೆಯನ್ನು 292ಕ್ಕೆ ಇಳಿಕೆ ಮಾಡಲಾಗಿದೆ.
292 ಆಟಗಾರರ ಪೈಕಿ ಭಾರತದ 164 ಆಟಗಾರರಿದ್ದಾರೆ. ಈ ಪೈಕಿ 14 ಮಂದಿ ಕರ್ನಾಟಕದ ಆಟಗಾರರಿದ್ದಾರೆ. ಉಳಿದಂತೆ 125 ಮಂದಿ ವಿದೇಶಿ ಆಟಗಾರರಿದ್ದಾರೆ. ಮೂರು ಮಂದಿ ಅಸೋಸಿಯೇಟ್ ರಾಷ್ಟ್ರಗಳ ಕ್ರಿಕೆಟಿಗರು. ನಿಷೇಧ ಮುಗಿಸಿ ದೇಶಿ ಕ್ರಿಕೆಟಿಗೆ ವಾಪಸ್ಸಾದ ಕೇರಳದ ಎಸ್. ಶ್ರೀಶಾಂತ್ ಈ ಪಟ್ಟಿಯಲ್ಲಿ ಇಲ್ಲದಿರುವುದೇ ಅಚ್ಚರಿ ಮೂಡಿಸಿದೆ. ಆದರೆ ಈ ಪಟ್ಟಿಯಲ್ಲಿ ಸಚಿನ್ ತೆಂಡುಲ್ಕರ್ ಅವರ ಪುತ್ರ ಅರ್ಜುನ್ ತೆಂಡುಲ್ಕರ್ ಹೆಸರು ಕಾಣಿಸಿಕೊಂಡಿದೆ.
ಹರಾಜಿನಲ್ಲಿ ಭಾಗವಹಿಸುವ ಕ್ರಿಕೆಟಿಗರ ಮೂಲ ಬೆಲೆಯನ್ನು ನಿಗದಿಪಡಿಸಲಾಗಿದ್ದು, ಗರಿಷ್ಠ ಬೆಲೆ 2 ಕೋಟಿ ರೂ., ಕನಿಷ್ಠ ಬೆಲೆ 20 ಲಕ್ಷ ರೂ. ಆಗಿದೆ. ಉಳಿದಂತೆ 1.5 ಕೋಟಿ, 1 ಕೋಟಿ, 75 ಲಕ್ಷ, 50 ಲಕ್ಷ, 40 ಲಕ್ಷ ಹಾಗೂ 30 ಲಕ್ಷ ರೂ. ಎಂದು ನಿಗದಿಗೊಳಿಸಲಾಗಿದೆ.
ಎರಡು ಕೋಟಿ.ರೂ ಮೂಲ ಬೆಲೆಯ ಯಾದಿಯಲ್ಲಿ ಒಟ್ಟು ಹತ್ತು ಮಂದಿ ಕ್ರಿಕೆಟಿಗರಿದ್ದಾರೆ. ಹರ್ಭಜನ್ ಸಿಂಗ್ ಸೇರಿದಂತೆ ಕೇದಾರ್ ಜಾದವ್, ಮೊಯಿಲ್ ಅಲಿ, ಜಾಸನ್ ರಾಯ್, ಸ್ಟೀವ್ ಸ್ಮಿತ್, ಸ್ಯಾಮ್ ಬಿಲ್ಲಿಂಗ್ಸ್, ಗೆನ್ ಮ್ಯಾಕ್ಸ್ವೆಲ್, ಮಾರ್ಕ್ ವುಡ್, ಹಸನ್ ಹಾಗೂ ಶಕಿಬ್ ಅಲ್ ಈ ಯಾದಿಯಲ್ಲಿದ್ದಾರೆ.
ಕನಿಷ್ಠ 20 ಲಕ್ಷ ರೂ.ಮೂಲ ಬೆಲೆಯ ಯಾದಿಯಲ್ಲಿ ಅರ್ಜುನ್ ತೆಂಡುಲ್ಕರ್ ಇದ್ದಾರೆ.