ಅಹಮದಾಬಾದ್, ಫೆ.20 (DaijiworldNews/PY): ಇಂಗ್ಲೆಂಡ್ ವಿರುದ್ದ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಎರಡನೇ ಪಂದ್ಯದಲ್ಲಿ ಜಯ ಸಾಧಿಸಿ ತಿರುಗೇಟು ನೀಡಿರುವ ಟೀಂ ಇಂಡಿಯಾದ ಆಟಗಾರರು ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ.
ಟೆಸ್ಟ್ನ ಅಂತಿಮ ಎರಡು ಪಂದ್ಯಗಳು ಅಹಮದಾಬಾದ್ನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಮೊಟೆರಾ ಮೈದಾನದಲ್ಲಿ ನಡೆಯಲಿದೆ. ಏತನ್ಮಧ್ಯೆ ಟೀಂ ಇಂಡಿಯಾ ಆಟಗಾರರು ಜಿಮ್ ಅಭ್ಯಾಸದ ಸಂದರ್ಭ ವಿಡಿಯೋವೊಂದನ್ನು ಪೋಸ್ಟ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಟೀಂ ಇಂಡಿಯಾದ ಆಟಗಾರರಾದ ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್ ಹಾಗೂ ಕುಲ್ದೀಪ್ ಯಾದವ್ ಅವರು ತಮಿಳು ಸಿನಿಮಾ ನಟ ವಿಜಯ್ ಅಭಿನಯದ ಮಾಸ್ಟರ್ ಚಿತ್ರದ ವಾತಿ ಕಮ್ಮಿಂಗ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ತಮಿಳುನಾಡು ಮೂಲದವರಾಗಿರುವ ರವಿಚಂದ್ರನ್ ಅಶ್ವಿನ್ ಅವರು, ಹಾಡಿಗೆ ಹೆಜ್ಜೆ ಹಾಕುವಂತೆ ಸಹ ಆಟಗಾರರಿಗೆ ಪ್ರೇರೇಪಿಸಿದ್ದಾರೆ. ಇದೇ ಹಾಡನ್ನು ಪ್ರತಿ ದಿನ ಆಲಿಸುವ ಮುಖಾಂತರ ಸ್ಪೂರ್ತಿ ಪಡೆಯುವುದಾಗಿ ಹೇಳಿದ್ದಾರೆ.
ಇನ್ನೊಂದೆಡೆ ವಿಕೆಟ್ ಕೀಪರ್ ರಿಷಭ್ ಪಂತ್ ಅವರು ಜಿಮ್ನಲ್ಲಿ ಸ್ಪೈಡರ್ ಮ್ಯಾನ್ ರೀತಿಯಲ್ಲಿ ವರ್ಕೌಟ್ ಮಾಡುವ ವಿಡಿಯೋವನ್ನು ಸಹ ಆಟಗಾರನಾದ ವಾಷಿಂಗ್ಟನ್ ಸುಂದರ್ ಬಿಡುಗಡೆ ಮಾಡಿದ್ದಾರೆ.
ಕಳೆದ ತಿಂಗಳು ಬ್ರಿಸ್ಬೇನ್ನಲ್ಲಿ ಆಸ್ಟ್ರೇಲಿಯಾ ವಿರುದ್ದ ನಡೆದ ಟೆಸ್ಟ್ ಪಂದ್ಯದ ಸಂದರ್ಭ ಟೀಂ ಇಂಡಿಯಾ ಆಟಗಾರ ರಿಷಬ್ ಪಂತ್ ಅವರು ಸ್ಪೈಡರ್ ಮ್ಯಾನ್ ಥೀಮ್ ಸಾಂಗ್ ಹಿಂದಿಯಲ್ಲಿ ಹಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.