ಅಹಮದಾಬಾದ್, ಫೆ. 25 (DaijiworldNews/SM): ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ 10 ವಿಕೆಟ್ ಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದೆ.
ಇಂಗ್ಲೆಂಡ್ ತಂಡಕ್ಕೆ ಮಾರಕವಾಗಿ ಕಾಡಿದ ಭಾರತದ ಬೌಲರ್ ಗಳು ಎರಡೂ ಇನ್ನಿಂಗ್ಸ್ ನಲ್ಲೂ ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳಿಗೆ ಮಾರಕವೆನಿಸಿದರು.
ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡ 48.4 ಓವರ್ ಗಳಲ್ಲಿ 10 ವಿಕೆಟ್ ಗಳ ನಷ್ಟಕ್ಕೆ 112 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 53.2 ಓವರ್ ಗಳಲ್ಲಿ 10 ವಿಕೆಟ್ ಗಳ ನಷ್ಟಕ್ಕೆ 145 ರನ್ ಗಳಿಸಿತು. ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಭಾರತೀಯ ಬೌಲರ್ ಗಳು ತೀವ್ರವಾಗಿ ಕಾಡಿದರು. ಇಂಗ್ಲೆಂಡ್ ತಂಡ 30.4 ಓವರ್ ಗಳಲ್ಲಿ ಹತ್ತು ವಿಕೆಟ್ ಗಳ ನಷ್ಟಕ್ಕೆ 81 ಗಳಿಸಲಷ್ಟೇ ಶಕ್ತವಾಯಿತು.
ಈ ಮೂಲಕ ಗೆಲುವಿನ ಗುರಿ ಬೆನ್ನತ್ತಿದ ಟೀಂ ಇಂಡಿಯಾ 7.4 ಓವರ್ ನಲ್ಲಿ ವಿಕೆಟ್ ನಷ್ಟವಿಲ್ಲದೆ 49 ರನ್ ಗಳಿಸಿ ಗೆಲುವಿನ ನಗೆ ಚೆಲ್ಲಿತು.
ಇನ್ನು ಟೀಂ ಇಂಡಿಯಾ ಪರ ಮೊದಲ ಇನ್ನಿಂಗ್ಸ್ ನಲ್ಲಿ ಅಕ್ಷರ್ ಪಾಟೇಲ್ 6 ವಿಕೆಟ್ ಕಬಲಿಸಿ ಇಂಗ್ಲೆಂಡ್ ತಂಡಕ್ಕೆ ಸಿಂಹಸ್ವಪ್ನರಾದರು. ಉಳಿದಂತೆ ಅಶ್ವಿನ್ 3 ವಿಕೆಟ್ ಪಡೆದರು. ಬ್ಯಾಟಿಂಗ್ ವಿಭಾಗದಲ್ಲಿ ರೋಹಿತ್ 66 ರನ್ ಸಿಡಿಸಿದ್ದು ಅತ್ಯಧಿಕ ಮೊತ್ತವಾಗಿದೆ. ಎರಡನೇ ಇನ್ನಿಂಗ್ಸ್ ನಲ್ಲಿ ಅಕ್ಷರ್ ಪಾಟೇಲ್ 5 ವಿಕೆಟ್ ಪಡೆದರೆ, ಅಶ್ವಿನ್ 4 ವಿಕೆಟ್ ಪಡೆದರು. ಆ ಮೂಲಕ ಒಟ್ಟು ಪಂದ್ಯದಲ್ಲಿ ಅಕ್ಷರ್ 11 ಹಾಗೂ ಅಶ್ವಿನ್ 7 ವಿಕೆಟ್ ಪಡೆದಂತಾಯಿತು.