ಅಹಮದಾಬಾದ್, ಫೆ. 25 (DaijiworldNews/SM): ಟೆಸ್ಟ್ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾದ ಹಿರಿಯ ಸ್ನಿನ್ನರ್ ಆರ್. ಅಶ್ವಿನ್ ಅವರು ಕಡಿಮೆ ಪಂದ್ಯದಲ್ಲಿ 400 ವಿಕೆಟ್ ಸಂಪಾದಿಸಿದ ಸಾಧನೆಗೈದಿದ್ದು, ಜಗತ್ತಿನ ಎರಡನೇ ಆಟಗಾರನೆನಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಅಶ್ವಿನ್ ಅವರು ಜೋಫ್ರಾ ಆರ್ಚರ್ ವಿಕೆಟ್ ಪಡೆಯುವ ಮೂಲಕ 400 ವಿಕೆಟ್ ಗಳ ಸರದಾರ ಎಣಿಸಿಕೊಂಡಿದ್ದಾರೆ. ಅಶ್ವಿನ್ ಅವರು ನಾಲ್ಕುನೂರು ಹುತ್ತರಿಗಳನ್ನು ಸಂಪಾದಿಸುವ ಮೂಲಕ 400 ವಿಕೆಟ್ ಗಳ ಕ್ಲಬ್ ಸೇರಿದ ಟೀಂ ಇಂಡಿಯಾದ ನಾಲ್ಕನೇ ಆಟಗಾರರೆನಿಸಿದ್ದಾರೆ.
ಇನ್ನು ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ 72 ಇನ್ನಿಂಗ್ಸ್ ಗಳಲ್ಲಿ 400 ಟೆಸ್ಟ್ ವಿಕೆಟ್ ಪಡೆದು ಮೊದಲಿಗರೆಣಿಸಿದರೆ, ಅಶ್ವಿನ್ 77 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಟೀಂ ಇಂಡಿಯಾ ಪರ ಮಾಜಿ ಲೆಗ್ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ 619 ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದಾರೆ. 434 ವಿಕೆಟ್ ಪಡೆಯುವ ಮೂಲಕ ಕಪಿಲ್ ದೇವ್ ಎರಡನೇ ಸ್ಥಾನದಲ್ಲಿದ್ದರೆ, ಹರ್ಭಜನ್ ಸಿಂಗ್ 417 ವಿಕೆಟ್ ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.