ಅಹಮದಾಬಾದ್, ಮಾ. 04 (DaijiworldNews/SM): ಮುಂದಿನ ಜುಲೈ ತಿಂಗಳಿನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನ ಉದ್ಘಾಟನಾ ಆವೃತಿಯ ಫೈನಲ್ ಪ್ರವೇಶಕ್ಕೆ ಟೀಂ ಇಂಡಿಯಾ ಉತ್ತಮ ಸಿದ್ಧತೆಯನ್ನೇ ನಡೆಸಿಕೊಂಡಿದೆ.
ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ದಾಳಿಗೆ ಇಂಗ್ಲೆಂಡ್ ತತ್ತರಿಸಿದೆ. ಟೀಂ ಇಂಡಿಯಾದ ಮಾರಕ ದಾಳಿಗೆ ತತ್ತರಿಸಿರುವ ಇಂಗ್ಲೆಂಡ್ 205 ರನ್ ಗಳಿಗೆ ಆಲೌಟ್ ಆಗಿದೆ. ಬಳಿಕ ಟೀಂ ಇಂಡಿಯಾ ಇನ್ನಿಂಗ್ಸ್ ಆರಂಭಿಸಿದ್ದು, 1 ವಿಕೆಟ್ ನಷ್ಟಕ್ಕೆ 24 ರನ್ ಗಳಿಸಿದೆ.
ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡು, 205 ರನ್ ಗಳನ್ನು ಗಳಿಸಲಷ್ಟೇ ಶಕ್ತವಾಯಿತು. ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್ 55, ಡಾನ್ ಲಾರೆನ್ಸ್ 46, ಒಲಿ ಪೊಪೆ 29, ಜಾನಿ ಬೇರ್ಸ್ಟೋವ್ 28 ರನ್ ಗಳಿಸಿ ತಂಡಕ್ಕೆ ನೆರವಾಗಿದ್ದರು. ಟೀಂ ಇಂಡಿಯಾ ಬೌಲರ್ ಗಳಾದ ಅಕ್ಷರ್ ಹಾಗೂ ಅಶ್ವಿನ್ ಮತ್ತೊಮ್ಮೆ ಮಿಂಚಿದರು. ಅಕ್ಷರ್ ಪಟೇಲ್ 4, ಅಶ್ವಿನ್ 3, ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದರು.
ಇನ್ನು ಮೊದಲ ಇನ್ನಿಂಗ್ಸ್ ಆರಂಭಿಸಿರುವ ಭಾರತ ಮೊದಲ ಆಘಾತ ಎದುರಾಯಿತು. ಶುಭ್ಮನ್ ಗಿಲ್ ಶೂನ್ಯಕ್ಕೆ ಔಟಾದರು. ನಂತರ ಜೊತೆಯಾದ ರೋಹಿತ್ ಶರ್ಮಾ ಅಜೇಯ 8 ಮತ್ತು ಚೇತೇಶ್ವರ ಪೂಜಾರಾ ಅಜೇಯ 15 ರನ್ ಬಾರಿಸಿ ಎರಡನೇ ದಿನಕ್ಕೆ ಆಟ ಕಾಯ್ದಿರಿಸಿದ್ದಾರೆ.