ಬೆಂಗಳೂರು, ಮಾ. 08 (DaijiworldNews/SM):ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡ ಕೇರಳ ತಂಡವನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದೆ.
ಕರ್ನಾಟಕ ಪರ ಆರಂಭಿಕ ದೇವದತ್ ಪಡಿಕ್ಕಲ್ ಸಿಡಿಸಿದ ಸತತ 4ನೇ ಶತಕ ತಂಡಕ್ಕೆ ನೆರವಾದರೆ, ನಾಯಕ ರವಿಕುಮಾರ್ ಸಮರ್ಥ್ ಅವರ 192 ರನ್ ಗಳು ತಂಡದ ಬೃಹತ್ ಮೊತ್ತಕ್ಕೆ ನೆರವಾದವು. ಆ ಮೂಲಕ ಕರ್ನಾಟಕ ತಂಡ 80 ರನ್ ಗಳಿಂದ ಕೇರಳ ತಂಡವನ್ನು ಮಣಿಸಿದ್ದು, ಸಮಿಫೈನಲ್ಸ್ ಪ್ರವೇಶಿಸಿದೆ.
ದೆಹಲಿಯಲ್ಲಿ ಸೋಮವಾರ ನಡೆದ ಕೇರಳ ವಿರುದ್ಧದ 2ನೇ ಕ್ವಾರ್ಟರ್ ಫೈನಲ್ ನಲ್ಲಿ ಕರ್ನಾಟಕ 50 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 338 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಈ ಗುರಿ ಬೆನ್ನಟ್ಟಿದ ಕೇರಳ ತಂಡ ರನ್ ಗಳಿಸಲು ಪರದಾಡಿತು. ರೋನಿತ್ ಮೋರೆ ದಾಳಿಗೆ ತತ್ತರಿಸಿದ ಕೇರಳ 43.4 ಓವರ್ ಗಳಲ್ಲಿ 258 ರನ್ ಗಳಿಗೆ ಸರ್ವ ಪತನಗೊಂಡಿತು.
ಕೇರಳ ಪರ ವತ್ಸಲ್ ಗೋವಿಂದ್ 92 ರನ್ ಗಳಿಸಿದರೆ, ಮೊಹಮದ್ ಅಜರುದ್ದೀನ್ 52 ರನ್ ಗಳಿಸಿ ಗೆಲುವಿಗಾಗಿ ಹೋರಾಡಿದರು. ರೋನಿತ್ ಮೋರೆ 5 ವಿಕೆಟ್ ಪಡೆದು ಮಿಂಚಿದರು.
ಅದ್ಭುತ ಫಾರ್ಮ್ ನಲ್ಲಿರುವ ದೇವದತ್ ಪಡಿಕಲ್ ಮತ್ತು ನಾಯಕ ಸಮರ್ಥ್ ಮೊದಲ ವಿಕೆಟ್ ಗೆ 249 ರನ್ ಜೊತೆಯಾಟದ ಮೂಲಕ ಬೃಹತ್ ಮೊತ್ತ ಪೇರಿಸಲು ನೆರವಾದರು.