ನವದೆಹಲಿ, ಮಾ.20 (DaijiworldNews/MB) : ಐಸಿಸಿ ಟಿ20 ವಿಶ್ವಕಪ್ ಅಕ್ಟೋಬರ್, ನವೆಂಬರ್ನಲ್ಲಿ ಭಾರತದಲ್ಲೇ ನಡೆಯಲಿದ್ದು ಇದರ ಸಿದ್ದತೆಯಲ್ಲಿ ಟೀಂ ಇಂಡಿಯಾ ತೊಡಗಿದೆ. ಆದರೆ ಈ ವಿಶ್ವ ಕಪ್ಗೂ ಕೆಲ ವಾರಗಳ ಮೊದಲು ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಆಡಲಿದೆ ಎಂದು ಬಿಸಿಸಿಐ ಮೂಲದಿಂದ ತಿಳಿದು ಬಂದಿರುವುದಾಗಿ ಮಾಧ್ಯಮ ವರದಿ ಮಾಡಿದೆ.
ವಿರಾಟ್ ಕೊಹ್ಲಿ ಪಡೆಯು ಐಪಿಎಲ್ ಬಳಿಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಡಲು ಇಂಗ್ಲೆಂಡ್ಗೆ ಹೋಗಿ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿ ಆಡಿ ಬಳಿಕ ಭಾರತಕ್ಕೆ ವಾಪಾಸ್ ಬರಲಿದೆ. ಸೆಪ್ಟೆಂಬರ್ ಕೊನೆ ವಾರ, ಅಕ್ಟೋಬರ್ ಮೊದಲ ವಾರದಲ್ಲಿ 2 ಟಿ20 ಸರಣಿಗಳನ್ನು ನಡೆಸಲು ಬಿಸಿಸಿಐ ಯೋಜಿಸಿದೆ. ಕಳೆದ ಮಾರ್ಚ್ನಲ್ಲಿ ಅರ್ಧಕ್ಕೆ ರದ್ದಾಗಿದ್ದ ಸರಣಿಯ ನಷ್ಟ ತುಂಬಿಕೊಡಲೆಂದು ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ದ್ವಿಪಕ್ಷೀಯ ಸರಣಿಯಾಡಲು ಒಪ್ಪಿಕೊಂಡಿದೆ ಎಂದು ಹೇಳಲಾಗಿದೆ.
ಇಂಗ್ಲೆಂಡ್ ವಿರುದ್ದದ ಸರಣಿ ಬಳಿಕ ಟೀಂ ಇಂಡಿಯಾ ಯಾವುದೇ ಟಿ20 ಸರಣಿ ಆಡುತ್ತಿಲ್ಲ ಎಂಬುದು ಪ್ರಸ್ತುತ ವೇಳಾಪಟ್ಟಿಯಲ್ಲಿದೆ. ಈ ಹಿನ್ನೆಲೆ ಟಿ20 ವಿಶ್ವಕಪ್ಗೂ ಮುನ್ನ ಬಿಸಿಸಿಐ ಟಿ20 ಸರಣಿ ಆಯೋಜಿಸಲಿದೆ ಎನ್ನಲಾಗಿದೆ. ಭಾರತ ಹಾಗೂ ಇಂಗ್ಲೆಂಡ್ ಮಧ್ಯೆ ನಡೆದ ಟಿ20 ಸರಣಿ 2-2ರಲ್ಲಿ ಸಮಗೊಂಡಿದೆ. ಮಾರ್ಚ್ 20ರಂದು ಮೊಟೇರಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ನಿರ್ಣಾಯಕ ಟಿ20 ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.