ಇಂದೋರ್, ಏ 5 (DaijiworldNews/MS): ಭಾರತದ ಪ್ರಥಮ ಮಹಿಳಾ ಕ್ರಿಕೆಟ್ ಕಮೆಂಟೇಟರ್ ಚಂದ್ರಾ ನಾಯ್ಡು ವಿಧಿವಶರಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯಕ್ಕೊಳಗಾಗಿದ್ದ 88 ವರ್ಷದ ಅವಿವಾಹಿತರಾಗಿದ್ದ ಚಂದ್ರಾ ನಾಯ್ಡು ಭಾನುವಾರದಂದು ಇಂದೋರ್ ನಲ್ಲಿ ನಿಧನರಾಗಿದ್ದಾರೆ.
ಚಂದ್ರಾ ಅವರ ಸೋದರಳಿಯ ಮತ್ತು ಮಾಜಿ ದೇಶೀಯ ಕ್ರಿಕೆಟಿಗ ವಿಜಯ್ ನಾಯ್ಡು ಅವರು, " ಚಿಕ್ಕಮ್ಮ ಮನೋರಮ್ಗಂಜ್ನಲ್ಲಿರುವ ಅವರ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ" ಎಂದು ಹೇಳಿದ್ದಾರೆ.
ಭಾರತ ಟೆಸ್ಟ್ ಕ್ರಿಕೆಟ್ ತಂಡದ ಪ್ರಪ್ರಥಮ ನಾಯಕರಾಗಿದ್ದ ಕರ್ನಲ್ ಸಿ.ಕೆ. ನಾಯ್ಡು ಅವರ ಪುತ್ರಿಯಾಗಿದ್ದ ಚಂದ್ರಾ ನಾಯ್ಡು, ಬಾಲ್ಯದಿಂದಲೂ ಕ್ರಿಕೆಟ್ ಕುರಿತು ಅತೀವ ಆಸಕ್ತಿ ಹೊಂದಿದ್ದರು. ಇಂದೂರಿನ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕಿಯಾಗಿದ್ದ ಚಂದ್ರಾ ನಾಯ್ಡು 1977 ರಲ್ಲಿ ಮೊದಲ ಬಾರಿಗೆ ಕ್ರಿಕೆಟ್ ಕಮೆಂಟರಿ ನೀಡಿದ್ದರು.
ತಮ್ಮ ತಂದೆ ಕರ್ನಲ್ ಸಿ.ಕೆ. ನಾಯ್ಡು ಅವರ ಸಾಧನೆಗಳ ಕುರಿತು 'ಸಿ.ಕೆ. ನಾಯ್ಡು - ಎ ಡಾಟರ್ ರಿಮೆಂಬರ್ಸ್' ಎಂಬ ಪುಸ್ತಕವನ್ನು ಸಹ ಚಂದ್ರಾ ನಾಯ್ಡು ಅವರು ಬರೆದಿದ್ದು, ಚಂದ್ರಾ ನಾಯ್ಡು ಅವರ ನಿಧನಕ್ಕೆ ಕ್ರಿಕೆಟ್ ಪ್ರೇಮಿಗಳು ಕಂಬನಿ ಮಿಡಿದಿದ್ದಾರೆ.
ಸಿಕೆ ನಾಯ್ಡು ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಹೆಸರು. ನಾಯ್ಡು ಹೆಸರಿನಲ್ಲಿ ಕ್ರಿಕೆಟಿಗರಿಗೆ ಇಂದಿಗೂ ಅನೇಕ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಅವರ ಮಗಳು ಚಂದ್ರ ನಾಯ್ಡು ಕೂಡ ಕ್ರಿಕೆಟ್ನಲ್ಲಿ ಭಾಗಿಯಾಗಿದ್ದರು.
1977 ರಲ್ಲಿ ಇಂದೋರ್ನಲ್ಲಿ ರಾಷ್ಟ್ರೀಯ ಚಾಂಪಿಯನ್ಸ್ ಬಾಂಬೆ ಮತ್ತು ಎಂಸಿಸಿ ತಂಡಗಳ ನಡುವೆ ಆಡಿದ ಕ್ರಿಕೆಟ್ ಪಂದ್ಯವೊಂದರಲ್ಲಿ ಅವರು ಮೊತ್ತ ಮೊದಲ ಬಾರಿಗೆ ಕ್ರಿಕೆಟ್ ನಿರೂಪಕರಾಗಿ ಕೆಲಸ ಮಾಡಿದರು. ಆದರೆ, ಚಂದ್ರ ನಾಯ್ಡು ಕ್ರಿಕೆಟ್ ನಿರೂಪಕರಾಗಿ ದೀರ್ಘಕಾಲ ವೃತ್ತಿಪರವಾಗಿ ಸಕ್ರಿಯರಾಗಿ ಮುಂದುವರಿಯಲಿಲ್ಲ.