ನವದೆಹಲಿ, ಎ.08 (DaijiworldNews/MB) : ಐಪಿಎಲ್ ನಾಳೆ ಆರಂಭವಾಗಲಿದ್ದು ಮೊದಲ ದಿನ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಎದುರಾಗಲಿದೆ. ಬೇರೆಲ್ಲಾ ತಂಡಗಳಿಗೆ ಹೋಲಿಸಿದರೆ ಅಭಿಮಾನಿಗಳ ಸಂಖ್ಯೆ ಅಧಿಕವಾಗಿಯೇ ಇರುವ ಆರ್ಸಿಬಿಗೆ ಹಲವು ಸುಪ್ರಸಿದ್ದ ಆಟಗಾರರು, ಸೆಲೆಬ್ರೆಟಿಗಳು ಬೆಂಬಲ ಘೋಷಿಸಿದ್ದಾರೆ. ಪ್ರಸಿದ್ಧ ಜಮೈಕಾದ ಓಟಗಾರ ಉಸೇನ್ ಬೋಲ್ಟ್ ಅವರು ಕೂಡಾ ಆರ್ಸಿಬಿ ಪರವಾಗಿದ್ದು ತಾನು ಆರ್ಸಿಬಿ ಜರ್ಸಿ ತೊಟ್ಟಿರುವ ಫೋಟೋವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡಕ್ಕೆ ಬೆಂಬಲ ಸೂಚಿಸಿರುವ ಉಸೇನ್ ಬೋಲ್ಟ್, ಚಾಲೆಂಜರ್ಗಳೆ, ನಾನು ಇನ್ನೂ ವೇಗವಾದ ಚಿರತೆ ಎಂದು ಟ್ವೀಟ್ ಮಾಡಿದ್ದು ಆರ್ಸಿಬಿ ಜೆರ್ಸಿ ಧರಿಸಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ. ಹಾಗೆಯೇ ವಿರಾಟ್ ಕೊಹ್ಲಿ ಮತ್ತು ಎ ಬಿ ಡಿ ವಿಲಿಯರ್ಸ್ನನ್ನು ಉಲ್ಲೇಖಿಸಿದ್ದಾರೆ. ಈ ಮೂಲಕ ಆರ್ಸಿಬಿ ತಂಡಕ್ಕೆ ಚಿಯರ್ಅಪ್ ಮಾಡಿದ್ದಾರೆ.
ಈ ಹಿಂದೆ ಬೋಲ್ಟ್ ತನಗೆ ಐಪಿಎಲ್ನಲ್ಲಿ ಆಡುವ ಅವಕಾಶ ಲಭಿಸಿದ್ದರೆ ಆರ್ಸಿಬಿ ಪರ ಆಡಬಯಸುತ್ತೇನೆ ಎಂದು ಹೇಳುವ ಮೂಲಕ ಆರ್ಸಿಬಿಗೆ ಬೆಂಬಲ ಸೂಚಿಸಿದ್ದರು.
ಇನ್ನು ಈ ಬಾರಿ ಆರ್ಸಿಬಿಗೆ ದೊಡ್ಡ ಹೊಡೆತ ಉಂಟಾಗಿದೆ. ಕಳೆದ ಬಾರಿ ಐಪಿಎಲ್ನಲ್ಲಿ ದೇವದತ್ ಪಡಿಕ್ಕಲ್ ಉತ್ತಮವಾಗಿ ಆಡಿ ತಂಡಕ್ಕೆ ಹುರುಪು ನೀಡಿದ್ದರು. ಆದರೆ ಈ ಬಾರಿ ಕೊರೊನಾ ಪಾಸಿಟಿವ್ ಆಗಿರುವ ಕಾರಣದಿಂದಾಗಿ ಅವರು ತಂಡದಲ್ಲಿ ಆಡುವುದಿಲ್ಲ. ಆದರೆ ಅವರು ಚೇತರಿಸಿಕೊಂಡ ಬಳಿಕ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಕೂಡಾ ಹೇಳಲಾಗಿದೆ.