ನವದೆಹಲಿ, ಏ.30 (DaijiworldNews/HR): ದೇಶದಲ್ಲಿ ಕೊರೊನಾ ಸೋಂಕು ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಸೋಂಕಿಗೆ ತುತ್ತಾದವರಿಗೆ ಆಕ್ಸಿಜನ್ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಆಕ್ಸಿಜನ್ ಪೂರೈಕೆಗೆ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ 1 ಕೋಟಿ ರುಪಾಯಿ ದೇಣಿಗೆ ನೀಡಿದ್ದಾರೆ.
ಸಚಿನ್ ತೆಂಡುಲ್ಕರ್ ಅವರು ದೆಹಲಿಯ ಉದ್ಯಮಿಗಳು ಸೇರಿ ರಚಿಸಿಕೊಂಡಿರುವ 'ಮಿಷನ್ ಆಕ್ಸಿಜನ್' ಹೆಸರಿನ ಸಂಸ್ಥೆಯೊಂದಕ್ಕೆ ದೇಣಿಗೆ ನೀಡಿದ್ದು, ಆ ಸಂಸ್ಥೆ ವಿದೇಶದಿಂದ ಆಕ್ಸಿಜನ್ ಉಪಕರಣಗಳನ್ನು ಆಮದು ಮಾಡಿಕೊಂಡು ಅಗತ್ಯವಿರುವ ಆಸ್ಪತ್ರೆಗಳಿಗೆ ಅವುಗಳನ್ನು ದಾನ ನೀಡುತ್ತದೆ.
ಇನ್ನು ಮೊನ್ನೆಯಷ್ಟೆ ಆಸ್ಟ್ರೇಲಿಯಾ ಕ್ರಿಕೆಟಿಗರಾದ ಪ್ಯಾಟ್ ಕಮಿನ್ಸ್ ಹಾಗೂ ಬ್ರೆಟ್ ಲೀ ಭಾರತದ ಕೊರೊನಾ ವಿರುದ್ದದ ಹೋರಾಟಕ್ಕೆ ಲಕ್ಷಾಂತರ ರುಪಾಯಿ ದೇಣಿಗೆ ನೀಡಿದ್ದರು. ಇದಾದ ಬಳಿಕ ಏಪ್ರಿಲ್ 29ರಂದು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ 7.5 ಕೋಟಿ ರುಪಾಯಿ ದೇಣಿಗೆ ನೀಡಿದ್ದರು.