ಮುಂಬೈ, ಜೂ. 07(DaijiworldNews/SM): ಕೊರೋನಾ ಕಾರಣದಿಂದ ಅರ್ಧಕ್ಕೆ ಮೊಟಕುಗೊಂಡಿದ್ದ ಐಪಿಎಲ್ ನ ಹದಿನಾಲ್ಕನೇ ಆವೃತಿಯ ಉಳಿದ ಪಂದ್ಯಗಳು ವಿದೇಶಿ ನೆಲದಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಭಾರತದಲ್ಲಿ ಕೊರೋನಾ ಸೋಂಕು ಹೆಚ್ಚಳದ ಕಾರಣದಿಂದ ಐಪಿಎಲ್ ಹದಿನಾಲ್ಕನೇ ಟೂರ್ನಿ ಅರ್ಧದಲ್ಲೇ ಮೊಟಕುಗೊಂಡಿತ್ತು. ಇದರಿಂದಾಗಿ ಅಭಿಮಾನಿಗಳಿಗೆ ನಿರಾಸೆಯುಂಟಾಗಿತ್ತು. ಇದೀಗ ಯುಎಇಯಲ್ಲಿ ಐಪಿಎಲ್ ನ ಉಳಿದ ಪಂದ್ಯಗಳನ್ನು ನಡೆಸಲು ಬಿಸಿಸಿಐ ನಿರ್ಧರಿಸಿದೆ. ಇದರಿಂದ ಈ ಆವೃತ್ತಿಯ ಉಳಿದ 31 ಪಂದ್ಯಗಳನ್ನು ಸೆಪ್ಟೆಂಬರ್ 19 ರಿಂದ ದುಬೈ, ಅಬುಧಾಬಿ ಹಾಗೂ ಶಾರ್ಜಾದಲ್ಲಿ ಆಯೋಜನೆಗೊಳ್ಳಲಿದೆ.
ಅಲ್ಲದೆ, ಈ ವರ್ಷದ ಐಪಿಎಲ್ ಫೈನಲ್ ಪಂದ್ಯ ಅಕ್ಟೋಬರ್ 15ರಂದು ನಡೆಯಲಿದೆ ಎನ್ನುವ ವಿಚಾರವನ್ನು ಕೂಡ ಬಿಸಿಸಿಐ ಬಹಿರಂಗಗೊಳಿಸಿದೆ. 25 ದಿನಗಳ ಒಳಗೆ ಟೂರ್ನಿಯನ್ನು ಮುಗಿಸಲು ಕ್ರಿಕೆಟ್ ಮಂಡಳಿ ಉತ್ಸುಕವಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.