ಚಂಡೀಗಢ, ಜೂ 19 (DaijiworldNews/PY): ಫ್ಲೈಯಿಂಗ್ ಸಿಖ್ ಎಂದೇ ಖ್ಯಾತಿ ಗಳಿಸಿದ್ದ ಭಾರತದ ಮಾಜಿ ಅಥ್ಲಿಟ್ ಮಿಲ್ಖಾ ಸಿಂಗ್ ಅವರು ನಿಧನರಾಗಿದ್ದಾರೆ.
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಿಲ್ಖಾ ಸಿಂಗ್ ಅವರು ಶುಕ್ರವಾರ ತಡರಾತ್ರಿ 11.30ರ ಸುಮಾರಿಗೆ ಮಿಲ್ಖಾ ಸಿಂಗ್ ನಿಧನರಾದರು ಎಂದು ಮಿಲ್ಖಾ ಕುಟುಂಬಿಕರು ಹೇಳಿದ್ದಾರೆ. ಐದು ದಿನಗಳ ಹಿಂದೆಯಷ್ಟೇ ಮಿಲ್ಖಾ ಸಿಂಗ್ ಅವರ ಪತ್ನಿ ನಿರ್ಮಲ್ ಅವರು ನಿಧನ ಹೊಂದಿದ್ದರು.
ಪಂಜಾಬ್ ಪ್ರಾಂತ್ಯಕ್ಕೆ ಸೇರಿರುವ ಗೋವಿಂದಪುರದಲ್ಲಿ 1935ರಲ್ಲಿ ಜನಿಸಿದ ಮಿಲ್ಖಾ ಸಿಂಗ್ ಅವರು ಟ್ರ್ಯಾಕ್ ಆಂಡ್ ಫೀಲ್ಡ್ನಲ್ಲಿ ಉತ್ತಮ ಸಾಧನೆ ಮಾಡಿದ್ದು, ತನ್ನ ವೇಗದಿಂದಲೇ ಫ್ಲೈಯಿಂಗ್ ಸಿಖ್ ಎಂದು ಖ್ಯಾತಿ ಪಡೆದಿದ್ದರು.
ಮಿಲ್ಖಾ ಸಿಂಗ್ 1958ರಲ್ಲಿ ಏಷ್ಯನ್ ಕ್ರೀಡಾಕೂಟದಲ್ಲಿ 200 ಮೀಟರ್ ಹಾಗೂ 400 ಮೀಟರ್ ಓಟದಲ್ಲಿ ಚಿನ್ನ, 1958ರ ಕಾಮನ್ ವೆಲ್ತ್ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಇದು ಭಾರತಕ್ಕೆ ಕಾಮನ್ವೆಲ್ತ್ನಲ್ಲಿ ಬಂದ ಮೊದಲ ಸ್ವರ್ಣ ಪದಕವಾಗಿತ್ತು. ಇವರ ಸಾಧನೆಗೆ ಭಾರತ ಸರ್ಕಾರದಿಂದ ಪದ್ಮಶ್ರೀ ಗೌರವ ನೀಡಿದೆ.