ನವದೆಹಲಿ, ಜು 02 (DaijiworldNews/PY): ಭಾರತದ ಮಾನಾ ಪಟೇಲ್ ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆ ಪಡೆದುಕೊಂಡಿದ್ದು, ಈ ಮೂಲಕ ಅವರು ಅರ್ಹತೆ ಪಡೆದ ದೇಶದ ಮೊದಲ ಮಹಿಳಾ ಹಾಗೂ ಮೂರನೇ ಭಾರತೀಯ ಈಜುಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಶ್ರೀಹರಿ ನಟರಾಜನ್ ಹಾಗೂ ಸಾಜನ್ ಪ್ರಕಾಶ್ ಅವರ ನಂತರ ಟೋಕಿಯೋ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವ ಭಾರತದ ಮೂರನೇ ಭಾರತೀಯ ಈಜುಗಾರ್ತಿ ಎನ್ನುವ ಹೆಗ್ಗಳಿಕೆಗೆ ಮಾನಾ ಪಟೇಲ್ ಅವರು ಪಾತ್ರರಾಗಿದ್ದಾರೆ.
ಈ ಬಗ್ಗೆ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಟ್ವೀಟ್ ಮಾಡಿದ್ದು, "ಬ್ಯಾಕ್ ಸ್ಟ್ರೋಕ್ ಈಜುಗಾರ್ತಿ ಮಾನಾ ಪಟೇಲ್ ಅವರು ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಮೊದಲ ಮಹಿಳಾ ಹಾಗೂ ಮೂರನೇ ಭಾರತೀಯ ಈಜುಗಾರ್ತಿಯಾಗಿದ್ದಾರೆ. ಯುನಿವರ್ಸಿಟಿ ಕೋಟಾ ಮೂಲಕ ಅರ್ಹತೆ ಪಡೆದ ಮಾನಾ ಪಟೇಲ್ ಅವರಿಗೆ ಶುಭಾಶಯ" ಎಂದು ತಿಳಿಸಿದ್ದಾರೆ.
ಈ ಮಧ್ಯೆ ಕರ್ನಾಟಕದ ಈಜುಪಟು ಶ್ರೀಹರಿ ನಟರಾಜನ್ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾಗವಹಿಸಲು ಅರ್ಹತೆ ಪಡೆದುಕೊಂಡಿದ್ದಾರೆ. ಇವರು ಇತ್ತೀಚೆಗೆ ಇಟಲಿಯ ಚಾಂಪಿಯನ್ಶಿಪ್ನ ಟೈಮ್ ಟ್ರಯಲ್ನಲ್ಲಿ ಎ ವಿಭಾಗದ ಸಮಯ ಸಾಧಿಸಿದ್ದರು. ಶ್ರೀಹರಿ ನಟರಾಜನ್ ಅವರು 100 ಮೀ. ಬ್ಯಾಕ್ಸ್ಟ್ರೋಕ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.
ಒಲಿಂಪಿಕ್ಸ್ನ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಭಾರತದ ಮೂರು ಈಜುಪಟುಗಳು ಟೋಕೊಯೋ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಲಿದ್ದಾರೆ. ಸಾಜನ್ ಪ್ರಕಾಶ್ ಅವರು 200 ಮೀ. ಬಟರ್ಫ್ಲೈ ವಿಭಾಗದಲ್ಲಿ ನೇರ ಅರ್ಹತೆ ಪಡೆದಿದ್ದು, ಸಾಧನೆ ಗೈದಿದ್ದರು. ಶ್ರೀಹರಿ ನಟರಾಜನ್ ಅವರು ಕೂಡಾ ಅರ್ಹತೆ ಪಡೆದಿದ್ದರು. ಈಗ ಮಾನಾ ಪಟೇಲ್ ಕೂಡಾ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾಗವಹಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.