ಕೊಲಂಬೊ, ಜು. 09 (DaijiworldNews/SM): ಭಾರತ ಹಾಗೂ ಶ್ರೀಲಂಕಾ ನಡುವಿನ ಕ್ರಿಕೆಟ್ ಪಂದ್ಯಗಳಿಗೆ ಕೊರೋನಾ ಕರಿಛಾಯೆ ಬೀರಲಾರಂಭಿಸಿದೆ. ಶ್ರೀಲಂಕಾ ಕ್ರಿಕೆಟ್ ತಂಡದ ಡೇಟಾ ವಿಶ್ಲೇಷಕ ಜಿಟಿ ನಿರೋಶನ್ ಅವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಆತಂಕ ಹೆಚ್ಚಾಗಿದೆ.
ಶ್ರೀಲಂಕಾ ಕ್ರಿಕೆಟ್ ಮಂಡಳಿ ಜುಲೈ 09ರಂದು ಈ ವಿಷಯವನ್ನು ಸ್ಪಷ್ಟಪಡಿಸಿದೆ. ಈ ಹಿಂದೆ ತಂಡದ ಬ್ಯಾಟಿಂಗ್ ಕೋಚ್ ಗ್ರಾಂಟ್ ಫ್ಲವರ್ ಗೆ ಕೋವಿಡ್ ತಗುಲಿತ್ತು. ಇದರ ಬೆನ್ನಲ್ಲೇ ತಂಡದ ಡಾಟಾ ವಿಶ್ಲೇಷಕರಿಗೂ ಕೋವಿಡ್-19 ಸೋಂಕು ತಗುಲಿದೆ ಎಂದು ತಿಳಿದುಬಂದಿದೆ. ರಾಷ್ಟ್ರೀಯ ಆಟಗಾರರು, ಕೋಚ್, ಸಹಾಯಕ ಸಿಬ್ಬಂದಿಗಳಿಗೆ ಪರೀಕ್ಷೆ ನಡೆಸಲಾಗಿತ್ತು. ಪಿಸಿಆರ್ ಟೆಸ್ಟ್ ವರದಿಯಲ್ಲಿ ಕೊರೋನಾ ಸೋಂಕು ಡೇಟಾ ವಿಶ್ಲೇಷಕರಿಗೆ ತಗುಲಿರುವುದು ದೃಢಪಟ್ಟಿದೆ.
ಭಾರತ-ಲಂಕಾ ನಡುವೆ ಜುಲೈ 13ಕ್ಕೆ ಸರಣಿ ಆರಂಭಗೊಳ್ಳಲಿದ್ದು, ಇನ್ನೇನು ವಾರ ಬಾಕಿ ಇದೆ. ಈ ಅವಧಿಯಲ್ಲೇ ಸೋಂಕು ಪತ್ತೆಯಾಗಿರುವುದ್ದು ಅಲ್ಪ ಆತಂಕಕ್ಕೆ ಕಾರಣವಾಗಿದೆ.