ನವದೆಹಲಿ, ಜು 13 (DaijiworldNews/MS): ಭಾರತದ ಮಾಜಿ ಕ್ರಿಕೆಟಿಗ ಮತ್ತು 1983 ರ ವಿಶ್ವಕಪ್ ವಿಜೇತ ತಂಡದ ಆಟಗಾರ ಯಶ್ಪಾಲ್ ಶರ್ಮಾ ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
66 ವರ್ಷದ ಯಶ್ಪಾಲ್ ಶರ್ಮಾ ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನ ಅಗಲಿದ್ದಾರೆ.
70 ಹಾಗೂ 80ರ ದಶಕದಲ್ಲಿ ಕ್ರಿಕೆಟ್ ಜೀವನದಲ್ಲಿ ಮಿಂಚಿದ್ದ ಯಶ್ಪಾಲ್ ಶರ್ಮಾ1983 ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದಿದ್ದ ಭಾರತ ತಂಡದ ಆಟಗಾರರಾಗಿದ್ದು ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 60 ರನ್ ಬಾರಿಸುವ ಮೂಲಕ ಗೆಲುವಿನ ರೂವಾರಿಯಾಗಿದ್ದರು.
ಆಗಸ್ಟ್ 11, 1954ರಲ್ಲಿ ಲೂಧಿಯಾನಾದಲ್ಲಿ ಜನಿಸಿದ್ದ ಪಂಜಾಬಿ ಕ್ರಿಕೆಟಿಗ ಯಶ್ಪಾಲ್ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಆಗಿದ್ದರು. 1979ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಟೆಸ್ಟ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದ ಯಶ್ಪಾಲ್ 37 ಪಂದ್ಯಗಳನ್ನ ಆಡಿದ್ದಾರೆ. ಟೆಸ್ಟ್ ಜೀವನದಲ್ಲಿ ಯಶ್ಪಾಲ್ ಎರಡು ಶತಕ ಹಾಗೂ 9 ಅರ್ಧಶತಕಗಳು ಸೇರಿದಂತೆ ಒಟ್ಟು 1606 ರನ್ಗಳನ್ನ ಗಳಿಸಿದ್ದರು.
ಯಶ್ಪಾಲ್ ಶರ್ಮಾ ಅವರ ನಿಧನಕ್ಕೆ ಕ್ರೀಡಾಲೋಕ ಕಂಬನಿ ಮಿಡಿದಿದ್ದು ಕ್ರಿಕೆಟ್ ಗಣ್ಯರು ಮತ್ತು ಬಿಸಿಸಿಐ ಸಂತಾಪ ಸೂಚಿಸಿದೆ.