ಟೋಕಿಯೊ, ಜು 24 (DaijiworldNews/MS): ಟೋಕಿಯೊ ಒಲಿಂಪಿಕ್ಸ್ನಲ್ಲಿ ಮಹಿಳೆಯರ 49 ಕೆಜಿ ವಿಭಾಗದಲ್ಲಿ ಭಾರತದ ವೇಟ್ಲಿಫ್ಟರ್ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದು ಬೀಗಿದ್ದಾರೆ.
ಸ್ಪರ್ಧೆಯಲ್ಲಿ ಮೀರಾಬಾಯಿ ಚಾನು ತನ್ನ ಅಂತಿಮ ಪ್ರಯತ್ನದಲ್ಲಿ 117 ಕೆ.ಜಿ.ಗೆ ಭಾರ ಎತ್ತಿಲು ಪ್ರಯತ್ನಿಸಿ ವಿಫಲವಾಗಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
2014 ರಿಂದ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ನಿಯಮಿತ ಉಪಸ್ಥಿತಿಯಲ್ಲಿರುವ ಚಾನು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ವಿಶ್ವ ಚಾಂಪಿಯನ್ಶಿಪ್ ಮತ್ತು ಬಹು ಪದಕಗಳನ್ನು ಗೆದ್ದಿದ್ದಾರೆ. ಏಪ್ರಿಲ್ನಲ್ಲಿ ತಾಷ್ಕೆಂಟ್ನಲ್ಲಿ ನಡೆದ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಚಾನು ಕ್ಲೀನ್ ಮತ್ತು ಜರ್ಕ್ನಲ್ಲಿ ವಿಶ್ವ ದಾಖಲೆ ಬರೆದು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು.
2018ರಲ್ಲಿ ಬೆನ್ನು ನೋವಿಗೆ ತುತ್ತಾಗಿರುವ ಮೀರಾ ಬಾಯಿ, ಒಂಬತ್ತು ತಿಂಗಳುಗಳಿಂದ ಕ್ರೀಡೆಯಿಂದ ದೂರವುಳಿದಿದ್ದರು. ಇದರಿಂದಾಗಿ ಮತ್ತೆ ಸ್ಪರ್ಧಾ ಜಗತ್ತಿಗೆ ಮರಳುವರೇ ಎಂಬ ಸಂದೇಹ ಮೂಡಿತ್ತು. ಆದರೆ ಆ ಬಳಿಕ ಕ್ರೀಡಾ ಜಗತ್ತಿಗೆ ಪುನರಾಗಮನವನ್ನು ಸಾರಿದ್ದರು.
ಒಲಿಂಪಿಕ್ಸ್ ವೇಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತಕ್ಕೆ ಇದು 2ನೇ ಪದಕವಾಗಿದೆ. ಕರ್ಣಂ ಮಲ್ಲೇಶ್ವರಿ ಬಳಿಕ ವೇಯ್ಟ್ ಲಿಫ್ಟಿಂಗ್ನಲ್ಲಿ ಪದಕ ಪಡೆದ 2ನೇ ಮಹಿಳಾ ಎಂಬ ಹೆಗ್ಗಳಿಕೆಗೆ ಮೀರಾಬಾಯಿ ಚಾನು ಪಾತ್ರರಾಗಿದ್ದಾರೆ.