ಪುಣೆ, ಜು 28 (DaijiworldNews/MS): 1956 ರಲ್ಲಿ ಅಂತರ್ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಎಂದು ಪ್ರಸಿದ್ಧ ಬ್ಯಾಡ್ಮಿಂಟನ್ ದಿಗ್ಗಜ ನಂದು ನಟೇಕರ್ ಬುಧವಾರ ನಿಧನ ಹೊಂದಿದ್ದು, ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ತಮ್ಮ ವೃತ್ತಿಜೀವನದಲ್ಲಿ 100 ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದ 88 ವರ್ಷದ ನಟೇಕರ್ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು
ಅತ್ಯಂತ ಜನಪ್ರಿಯ ಕ್ರೀಡಾಪಟುಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ನಟೇಕರ್ ಅವರು ಮಾಜಿ ವಿಶ್ವ ನಂಬರ್ ಮೂರನೆಯವರಾಗಿದ್ದರು. ಪಶ್ಚಿಮ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಜನಿಸಿದ ನಟೇಕರ್, 15 ವರ್ಷಗಳ ವೃತ್ತಿಜೀವನದಲ್ಲಿ 100 ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರಿಗೆ 1961 ರಲ್ಲಿ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯನ್ನೂ ನೀಡಲಾಯಿತು.
ನಟೇಕರ್ 1954 ರಲ್ಲಿ ನಡೆದ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಚಾಂಪಿಯನ್ಶಿಪ್ನಲ್ಲಿ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಅಲ್ಲದೇ 1956 ರಲ್ಲಿ ಮಲೇಷಿಯಾದಲ್ಲಿ ಸೆಲ್ಲಂಜರ್ ಇಂಟರ್ನ್ಯಾಷನಲ್ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದರು.
1951 ಮತ್ತು 1963 ರ ನಡುವೆ ಥಾಮಸ್ ಕಪ್ನಲ್ಲಿ ಭಾರತೀಯ ತಂಡದ ಭಾಗವಾಗಿ 16 ಸಿಂಗಲ್ಸ್ ಪಂದ್ಯಗಳಲ್ಲಿ 12 ಮತ್ತು ಡಬಲ್ಸ್ನಲ್ಲಿ 16 ರಲ್ಲಿ 8 ಪಂದ್ಯಗಳನ್ನು ಗೆದ್ದಿದ್ದರು. 1959, 1961 1963 ಮತ್ತು ಪಂದ್ಯಾವಳಿಯಲ್ಲಿ ದೇಶವನ್ನು ಮುನ್ನಡೆಸುವ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರು. . ಅವರು 1965 ರಲ್ಲಿ ಜಮೈಕಾದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
ಇವರಿಗೆ ಓರ್ವ ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕಳೆದ ಮೂರು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ಮನೆಯಲ್ಲಿ ನಿಧನರಾಗಿದ್ದಾರೆ ಎಂದು ಪುತ್ರ ಗೌರವ್ ಹೇಳಿದ್ದಾರೆ.