ಟೋಕಿಯೊ, ಜು 31(DaijiworldNews/MS): ಟೋಕಿಯೊ ಒಲಿಂಪಿಕ್ಸ್ -2020 ರಲ್ಲಿ ಚಿನ್ನದ ಪದಕದ ಆಸೆ ಮೂಡಿಸಿದ್ದ ಭಾರತದ ಸ್ಟಾರ್ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು, ಶನಿವಾರ ಸೆಮಿ ಫೈನಲ್ ಪಂದ್ಯದಲ್ಲಿ ಕಠಿಣ ಪ್ರತಿಸ್ಪರ್ದಿಯ ಮುಂದೆ ಶರಣಾಗಿದ್ದಾರೆ.
ಮಹಿಳಾ ಸಿಂಗಲ್ಸ್ ವಿಭಾಗದ ಎರಡನೇ ಸೆಮಿಫೈನಲ್ನಲ್ಲಿ ವಿಶ್ವ ಚಾಂಪಿಯನ್ ಸಿಂಧು ನೇರ ಪೈಪೋಟಿಯಲ್ಲಿ ತನ್ನ ಕಠಿಣ ಪ್ರತಿಸ್ಪರ್ಧಿ ಚೈನೀಸ್ ತೈಪೆಯ ತೈ ತ್ಸು ಯಿಂಗ್ ಅವರ ವಿರುದ್ಧ ಸೋಲನುಭವಿಸಿದರು. ಚೀನಾದ ತೈಪೆ ಆಟಗಾರ್ತಿ ಈ ಕಠಿಣ ಪಂದ್ಯದಲ್ಲಿ -21-18, 21-12 ಸೆಟ್ಗಳಲ್ಲಿ ಗೆದ್ದು ಫೈನಲ್ಗೆ ಪ್ರವೇಶ ಪಡೆದರು.
ಈ ಹಿಂದೆಯೂ ಚೈನೀಸ್ ತೈಪೆಯ ತಾಯ್ ಭಾರತದ ಪಿವಿ ಸಿಂಧು ವಿರುದ್ಧ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಹೀಗಾಗಿ ಪಿವಿ ಸಿಂಧು ಅವರಿಗೆ ಈ ಪಂದ್ಯ ಅಗ್ನಿ ಪರೀಕ್ಷೆಯಾಗಿತ್ತು. ಈ ಇಬ್ಬರು ಆಟಗಾರ್ತಿಯರ ಮಧ್ಯೆ ಈವರೆಗೆ ಒಟ್ಟು 18 ಪಂದ್ಯಗಳು ನಡೆದಿದೆ. ಇದರಲ್ಲಿ ತಾಯ್ ಟ್ಜು ಯಿಂಗ್ ಸಂಪೂರ್ಣ ಮೇಲುಗೈ ಸಾಧಿಸಿದ್ದಾರೆ. ತಾಯ್ ಟ್ಜು ಯಿಂಗ್ ಒಟ್ಟು 13 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ ಪಿವಿ ಸಿಂಧು ಕೇವಲ 5ರಲ್ಲಿ ಗೆದ್ದಿದ್ದಾರೆ. ಇದೀಗ ಒಲಿಂಪಿಕ್ಸ್ ನಲ್ಲೂ ಸಿಂಧು ವಿರುದ್ದ ತೈಪೆಯ ತಾಯ್ ಗೆಲುವು ಸಾಧಿಸಿದ್ದಾರೆ.