ಟೋಕಿಯೊ, ಆ. 01 (DaijiworldNews/SM): ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪಿ.ವಿ. ಸಿಂಧು ಕಂಚು ಬೇಟೆಯಾಡಿದ ಬೆನ್ನಲ್ಲೇ ಭಾರತೀಯ ಹಾಕಿ ಟೀಂ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ. ಈ ಗೆಲುವಿನೊಂದಿಗೆ ಭಾರತೀಯ ಪುರಷರ ಹಾಕಿ ತಂಡ 49 ವರ್ಷಗಳ ನಂತರ ಸೆಮಿಫೈನಲ್ಸ್ ಗೆ ಪ್ರವೇಶಿಸಿದೆ.
ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ 3-1 ಗೋಲಿನಿಂದ ಟೀಂ ಇಂಡಿಯಾ ಗೆಲುವು ದಾಖಲಿಸಿದೆ. ಭಾರತ ತಂಡದ ಪರವಾಗಿ ದಿಲ್ ಪ್ರೀತ್ ಸಿಂಗ್, ಗುರ್ಜಂತ್ ಸಿಂಗ್ ಹಾಗೂ ಹಾರ್ದಿಕ್ ಸಿಂಗ್ ತಲಾ ಒಂದು ಗೋಲು ಗಳಿಸಿದರು. ಗ್ರೇಟ್ ಬ್ರಿಟನ್ ಪರವಾಗಿ ಸ್ಯಾಮುಯೆಲ್ ವಾರ್ಡ್ ಪಂದ್ಯದಲ್ಲಿ ಏಕಮಾತ್ರ ಗೋಲು ಗಳಿಸಿದರು. ಮಂಗಳವಾರ ನಡೆಯುವ ಸೆಮಿಫೈನಲ್ಸ್ ಪಂದ್ಯದಲ್ಲಿ ಭಾರತ, ಬೆಲ್ಜಿಯಂ ವಿರುದ್ಧ ಸೆಣಸಲಿದೆ.
1972ರಲ್ಲಿ ಮುನಿಚ್ ಒಲಿಂಪಿಕ್ಸ್ ನ ಸೆಮಿಫೈನಲ್ಸ್ ಭಾರತ ಆಡಿದ್ದು, ಈ ಪಂದ್ಯದಲ್ಲಿ ಸಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 0-2 ಗೋಲಿನಿಂದ ಸೋಲನುಭವಿಸಿತ್ತು.