ನವದೆಹಲಿ, ಆ 08 (DaijiworldNews/PY): ಟೋಕಿಯೊ ಒಲಿಂಪಿಕ್ಸ್ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರಿಗೆ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ. ಇವರ ಈ ಸಾಧನೆಗಾಗಿ ಸರ್ಕಾರಗಳು ಹಲವು ಕೊಡುಗೆಗಳನ್ನು ಘೋಷಿಸುತ್ತಿದೆ.
ಹರಿಯಾಣ ಸಿಎಂ 6 ಕೋಟಿ ನಗದು ಬಹುಮಾನದ ಜೊತೆಗೆ ನಿಯಮದಂತೆ ಸರ್ಕಾರದಲ್ಲಿ ಕ್ಲಾಸ್ ಒನ್ ಕೆಟಗರಿ ಕೆಲಸ ನೀಟುವುದಾಗಿ ಘೋಷಣೆ ಮಾಡಿದ್ದಾರೆ. ಅಲ್ಲದೇ, ಕ್ರೀಡಾಪಡುಗಳಿಗಾಗಿ ಪಂಚಕುಲದಲ್ಲಿ ಸೆಂಟರ್ ಆಫ್ ಎಕ್ಸೆಲೆನ್ಸ್ ಕಟ್ಟಡ ನಿರ್ಮಿಸುವುದಾಗಿ ಹೇಳಿದ್ದಾರೆ. ನೀರಜ್ ಅವರು ಬಯಸಿದಲ್ಲಿ ಹರಿಯಾಣ ಪ್ರದೇಶದ ಮುಖ್ಯಸ್ಥರನ್ನಾಗಿ ಮಾಡುವುದಾಗಿ ಹರಿಯಾಣ ಮುಖ್ಯಮಂತ್ರಿ ಸಿಎಂ ಖಟ್ಟರ್ ಹೇಳಿದ್ದಾರೆ.
ಚೋಪ್ರಾ ಅವರಿಗೆ ಮಣಿಪುರ ಸಿಎಂ ಎನ್.ಬಿರೇನ್ ಸಿಂಗ್ ಅವರು 1 ಕೋಟಿ ರೂ. ಬಹುಮಾನ ನೀಡುವ ಮೂಲಕ ಗೌರವಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮೂಲಕ ಚೋಪ್ರಾ ಅವರಿಗೆ ಶುಭಾಶಯ ತಿಳಿಸಿದ್ದಾರೆ.
ನೀರಜ್ ಚೋಪ್ರಾ ಅವರಿಗೆ ವಿಮಾನಯಾನ ಸಂಸ್ಥೆ ಇಂಡಿಗೋ ಒಂದು ವರ್ಷಗಳ ಕಾಲ, ಅಂದರೆ ಮುಂದಿನ ವರ್ಷ ಆಗಸ್ಟ್ 8ರವರೆಗೂ ಉಚಿತವಾಗಿ ಪ್ರಯಾಣ ಮಾಡಲು ಟಿಕೆಟ್ ಅನ್ನು ಘೋಷಣೆ ಮಾಡಿದೆ.
ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು 2.25 ಕೋಟಿ ರೂ. ಘೋಷಿಸಿದ್ದು, ಭಾರತೀಯರು ಹೆಮ್ಮೆ ಪಡುವಂತಹ ವಿಚಾರವೆಂದು ಪ್ರಶಂಸಿದ್ದಾರೆ. ಬೆಳ್ಳಿ ಪದಕ ಗೆದ್ದವರಿಗೆ 1.5 ಕೋಟಿ ರೂ.ಗಳನ್ನು ಸಹ ಘೋಷಿಸಿದ್ದಾರೆ. ಇನ್ನು 26 ಅಥ್ಲಿಟ್ಸ್ ಆಟಗಾರರಿಗೆ 5 ಲಕ್ಷ ರೂ. ಘೋಷಿದ್ದಾರೆ.
ನೀರಜ್ ಅವರಿಗೆ 1 ಕೋಟಿ ರೂ. ನೀಡುವುದಾಗಿ ಬಿಸಿಸಿಐ ತಿಳಿಸಿದ್ದು, ಕಂಚಿನ ಪದಕ ವಿಜೇತರಾದ ಪಿವಿ ಸಿಂಧು ಅವರಿಗೆ 50 ಲಕ್ಷ ರೂ. ಚಾನು, ರವಿ ಧಾಹಿಯಾ ಹಾಗೂ ಭಜರಂಗ್ ಪುನಿಯಾ ಅವರಿಗೆ 25 ಲಕ್ಷ ರೂ., ಅಲ್ಲದೆ ಪುರುಷರ ಹಾಕಿ ತಂಡಕ್ಕೆ 1.25 ಕೋಟಿ ರೂ. ಕೊಟ್ಟು ಆಟಗಾರರನ್ನು ಗೌರವಿಸಿ ಎಲ್ಲರನ್ನೂ ಐಪಿಎಲ್ನ ಫೈನಲ್ಗೆ ಆಹ್ವಾನಿಸಲಾಗಿದೆ. ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಸಹ ನೀರಜ್ ಚೋಪ್ರಾ ಅವರಿಗೆ 1 ಕೋಟಿ ರೂ. ನೀಡುವುದಾಗಿ ಹೇಳಿದೆ.
ನೀರಜ್ ಅವರಿಗೆ ಮಹೀಂದ್ರಾ ಸಂಸ್ಥೆಯ ಮುಖ್ಯಸ್ಥ ಆನಂದ್ ಮಹೀಂದ್ರಾ ಮಹೀಂದ್ರಾ ನ್ಯೂ ಎಕ್ಸ್ಯುವಿ 700 ಅನ್ನು ಬಹುಮಾನವಾಗಿ ನೀಡುವುದಾಗಿ ಟ್ವೀಟ್ ಮೂಲಕ ತಿಳಿಸಿದೆ.
ಒಲಿಂಪಿಕ್ಸ್ನಲ್ಲಿ ಪದಕ ಗಳಿಸಿದ ವಿಜೇಯರನ್ನು ಕೆಂಪು ಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವದ ವಿಶೇಷ ಅತಿಥಿಗಳನ್ನಾಗಿ ಪ್ರಧಾನಿ ಮೋದಿ ಅವರು ಆಹ್ವಾನಿಸಿದ್ಧಾರೆ. ಅಲ್ಲದೇ, ಸ್ವತಃ ಪ್ರಧಾನಿ ಅವರೇ ತಮ್ಮ ನಿವಾಸಕ್ಕೆ ಆಹ್ವಾನಿಸಿ ಮಾತನಾಡಲಿದ್ದಾರೆ.