ಪುಣೆ, ಆ 21 (DaijiworldNews/PY): ಪುಣೆಯಲ್ಲಿರುವ ಆರ್ಮಿ ಸ್ಪೋರ್ಟ್ಸ್ ಇನ್ಸ್ಟಿಟ್ಯೂಟ್ ಆವರಣದಲ್ಲಿರುವ ಅಥ್ಲೆಟಿಕ್ಸ್ ಕ್ರೀಡಾಂಗಣಕ್ಕೆ ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಹೆಸರಿಡಲು ಸಂಸ್ಥೆ ತೀರ್ಮಾನಿಸಿದೆ.
ಟೋಕಿಯೊ ಒಲಿಂಪಿಕ್ಸ್ನ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರಿಗೆ ಗೌರವ ಸಲ್ಲಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ. ಆಗಸ್ಟ್ 23ರಂದು ಕ್ರೀಡಾಂಗಣದ ಅಧಿಕೃತ ನಾಮಕರಣ ಸಮಾರಂಭ ನಡೆಯಲಿದ್ದು, ರಕ್ಷಣ ಸಚಿವ ರಾಜನಾಥ್ ಸಿಂಗ್ ಅವರು ಆಗಮಿಸಲಿದ್ದಾರೆ. ಸಮಾರಂಭದಲ್ಲಿ ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನರವಾಣೆ ಹಾಗೂ ಲೆಫ್ಟಿನೆಂಟ್ ಗವರ್ನರ್ ಜೆಎಸ್ ನೈನ್ ಭಾಗವಹಿಸಲಿದ್ದಾರೆ.
ಈ ಸಂದರ್ಭ ಭಾರತೀಯ ಸೇನೆಯ 16 ಒಲಿಂಪಿಯನ್ಗಳನ್ನು ಸನ್ಮಾನಿಸಲಾಗುತ್ತದೆ.
"ಕ್ರೀಡಾಂಗಣವು ಅಂತರಾಷ್ಟ್ರೀಯ ಗುಣಮಟ್ಟವನ್ನು ಹೊಂದಿದ್ದು, ಎಲ್ಲಾ ಕ್ರೀಡಾಪಡುಗಳಿಗೆ ಪ್ರತಿದಿನ ತರಬೇತಿ ನೀಡಲಾಗುತ್ತದೆ. ಕ್ರೀಡಾಂಗಣಕ್ಕೆ ಯಾವುದೇ ಹೆಸರಿಡದ ಕಾರಣ, ನೀರಜ್ ಚೋಪ್ರಾ ಅವರ ಹೆಸರಿಡಲು ತೀರ್ಮಾನಿಸಿದ್ದೇವೆ" ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.