ನವದೆಹಲಿ, ಆ.27 (DaijiworldNews/HR): ಟೋಕಿಯೊ ಒಲಿಂಪಿಕ್ಸ್ನಲ್ಲಿ ಪಾಕ್ ಅಥ್ಲೀಟ್ ಅರ್ಷದ್ ನದೀಮ್ ತಮ್ಮ ಜಾವೆಲಿನ್ ತೆಗೆದುಕೊಂಡಿದ್ದನ್ನು ಮತ್ತು ಅವರಿಂದ ತಾವು ಪಡೆದಿದ್ದನ್ನು ಭಾರತದ ನೀರಜ್ ಚೋಪ್ರಾ ಸಮರ್ಥಿಸಿಕೊಂಡಿದ್ದು, ಈ ಬಗ್ಗೆ ನಡೆಯುತ್ತಿರುವ ವಾದ-ವಿವಾದಗಳಿಗೆ ಅಸಮಾಧಾನ ವ್ಯಕ್ತಪಡಿಸಿದ್ಧಾರೆ.
ಈ ಕುರಿತು ಟ್ವಿಟರ್ನಲ್ಲಿ ವಿಡಿಯೊ ಬಿಡುಗಡೆ ಮಾಡಿರುವ ನೀರಜ್, "ನನ್ನ ಹೇಳಿಕೆಗಳನ್ನು ನಿಮ್ಮ ಹಿತಾಸಕ್ತಿ ಹಾಗೂ ಪ್ರಚಾರಕ್ಕಾಗಿ ನನ್ನ ಹೇಳಿಕೆಗಳನ್ನು ಬಳಸಿಕೊಳ್ಳಬೇಡಿ. ನಾವೆಲ್ಲರೂ ಒಂದು, ಒಗ್ಗಟ್ಟಾಗಿರಲು ಕ್ರೀಡೆ ನಮಗೆ ಕಲಿಸುತ್ತದೆ. ನನ್ನ ಇತ್ತೀಚಿನ ಹೇಳಿಕೆಗಳಿಗೆ ಕೆಲವರಿಂದ ಬಂದ ಪ್ರತಿಕ್ರಿಯೆಗಳನ್ನು ನೋಡಿ ತುಂಬಾ ಬೇಸರವಾಗಿದೆ" ಎಂದರು.
ಇನ್ನು "ಸ್ಪರ್ಧೆಯಲ್ಲಿ ಎಲ್ಲರ ಜಾವೆಲಿನ್ಗಳು ಒಂದೇ ಕಡೆ ಇರುತ್ತವೆ. ಅವುಗಳನ್ನು ಯಾರು ಬೇಕಾದರೂ ತೆಗೆದುಕೊಳ್ಳಬಹುದು. ಅರ್ಷದ್ ನನ್ನ ಜಾವೆಲಿನ್ ಹಿಡಿದು ಥ್ರೋಗೆ ತಯಾರಿ ಮಾಡುತ್ತಿದ್ದರು. ಇದು ದೊಡ್ಡ ವಿಷಯವೇನಲ್ಲ. ಪಾಕಿಸ್ತಾನದ ಕ್ರೀಡಾಪಟು ನನ್ನ ಜಾವೆಲಿನ್ ತೆಗೆದುಕೊಂಡಿದ್ದರಲ್ಲಿ ತಪ್ಪೇನಿಲ್ಲ" ಎಂದು ಹೇಳಿದ್ದಾರೆ.