ಲಂಡನ್, ಸೆ. 12 (DaijiworldNews/SM): ಟೀಂ ಇಂಡಿಯಾದ ಸಿಬ್ಬಂದಿಗಳಲ್ಲಿ ಕೋವಿಡ್ ಪಾಸಿಟಿವ್ ಕಂಡು ಬಂದಿರುವ ಹಿನ್ನೆಲೆಯಲ್ಲಿ ಭಾರತ-ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯ ರದ್ದುಗೊಂಡಿದ್ದು, ಇದಕ್ಕೆ ನಾನು ಕಾರಣನಲ್ಲ ಎಂದು ಭಾರತ ತಂಡದ ಪ್ರಮುಖ ಕೋಚ್ ರವಿಶಾಸ್ತ್ರಿ ಪ್ರತಿಕ್ರಿಯೆ ನೀಡಿದ್ದಾರೆ.
ಐದನೇ ಟೆಸ್ಟ್ ಪಂದ್ಯ ರದ್ದಾಗಲು ಪ್ರಮುಖ ಕಾರಣ ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ ಹಾಗೂ ಕೆಲವು ಆಟಗಾರರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿರುವುದು. ಬಿಸಿಸಿಐ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಅನುಮತಿ ಪಡೆಯದೆ ಕಾರ್ಯಕ್ರಮಕ್ಕೆ ತೆರಳಿದ್ದರು. ಈ ಹಿನ್ನೆಲೆಯಲ್ಲಿ ಮೊದಲು ರವಿಶಾಸ್ತ್ರಿ ಪ್ರಮುಖ ಕಾರಣರಾಗಿದ್ದಾರೆ ಎನ್ನಲಾಗಿತ್ತು. ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಶ್ರೀಧರ್, ಹಿರಿಯ ಫಿಸಿಯೋ ನಿತಿನ್ ಪಟೇಲ್ ಅವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಈ ಕಾರಣದಿಂದಾಗಿ ಪಂದ್ಯ ರದ್ದುಗೊಂಡಿತ್ತು. ರವಿಶಾಸ್ತ್ರಿಯವರ ವಿರುದ್ಧ ಟೀಕೆಗಳು ಕೇಳಿಬಂದಿದ್ದವು. ಇದೀಗ ರವಿಶಾಸ್ತ್ರಿ ಪ್ರತಿಕ್ರಿಯಿಸಿದ್ದಾರೆ. ಇಂಗ್ಲೇಂಡ್ ನಲ್ಲಿ ಎಲ್ಲ ಬಾರ್ ಗಳು ತೆರೆದಿವೆ, ಆದರೆ ತಮ್ಮಿಂದಾಗಿ ತಂಡದ ಸದಸ್ಯರಿಗೆ ಕೊರೊನಾ ಸೋಂಕು ತಗುಲಿದೆ ಎಂಬುದನ್ನು ನಾನು ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ.