ಕೊಲಂಬೊ, ಸೆ. 14 (DaijiworldNews/SM): ಶ್ರೀಲಂಕಾ ತಂಡದ ವೇಗದ ಬೌಲರ್ ಹಾಗೂ ಮಾಜಿ ನಾಯಕ ಲಸಿತ್ ಮಲಿಂಗ ಎಲ್ಲಾ ಆವೃತ್ತಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.
ಮಲಿಂಗ ಶ್ರೀಲಂಕಾ ತಂಡದ 2014ರ ಟಿ-20 ವಿಶ್ವಕಪ್ ವಿಜೇತ ತಂಡದಲ್ಲಿ ನಾಯಕರಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ ತಂಡದಲ್ಲಿ ಅವಕಾಶ ವಂಚಿತರಾಗಿದ್ದರು. ಇದೀಗ ಅವರು ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.
ಇಂದು ನನಗೆ ವಿಶೇಷ ದಿನವಾಗಿದ್ದು, ಟಿ20 ವೃತ್ತಿ ಜೀವನದಲ್ಲಿ ನನ್ನನ್ನು ಬೆಂಬಲಿಸಿ, ಹಾರೈಸಿದ ಎಲ್ಲರಿಗೂ ಧನ್ಯವಾದ ಎಂದು ಮಲಿಂಗ ಹೇಳಿಕೊಂಡಿದ್ದಾರೆ. ಮಲಿಂಗ ಆಸ್ಟ್ರೇಲಿಯಾದ ವಿರುದ್ಧ 2004 ರಲ್ಲಿ ಪಂದ್ಯ ಆಡುವ ಮೂಲಕ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆಗೈದರು. ಇದಾದ 16 ದಿನಗಳ ಬಳಿಕ ಮೊದಲ ಏಕದಿನ ಪಂದ್ಯವನ್ನಾಡಿದ್ದರು.
ಮಲಿಂಗಾ ತಮ್ಮ ಯಾರ್ಕರ್ ಗಳಿಂದಲೇ ಖ್ಯಾತಿ ಪಡೆದಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸತತ 4 ಎಸೆತಗಳಲ್ಲಿ 4 ವಿಕೆಟ್ ಗಳನ್ನು ಪಡೆದ ದಾಖಲೆ ಮಲಿಂಗ ಅವರದಾಗಿದೆ. 2006 ರಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯವನ್ನಾಡಿದ್ದರು.
ಟಿ-20ಯಲ್ಲಿ 84 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿ 107 ವಿಕೆಟ್ ಪಡೆದಿದ್ದರು. 226 ಏಕದಿನ ಪಂದ್ಯಗಳನ್ನಾಡಿದ್ದು, 338 ವಿಕೆಟ್ ಗಳನ್ನು ಗಳಿಸಿದ್ದಾರೆ. ಇನ್ನು 30 ಟೆಸ್ಟ್ ನಲ್ಲಿ 101 ವಿಕೆಟ್ ಗಳನ್ನು ಗಳಿಸಿದ್ದಾರೆ.