ಮುಂಬೈ, ಅ.09 (DaijiworldNews/PY): ಯುಎಇನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಹೊಸ ಸಮವಸ್ತ್ರ ಧರಿಸಿ ಆಡಲಿದ್ದು, ಅಕ್ಟೋಬರ್ 13ರಂದು ಹೊಸ ವಿನ್ಯಾಸದ ಸಮವಸ್ತ್ರವನ್ನು ಬಿಸಿಸಿಐ ಅನಾವರಣಗೊಳಿಸಲಿದೆ.
ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 17ರಿಂದ ನವೆಂಬರ್ 14ರವರೆಗೆ ನಡೆಯಲಿದ್ದು, ಟೀಂ ಇಂಡಿಯಾ ಹೊಸ ಸಮವಸ್ತ್ರ ಧರಿಸಲಿದೆ.
"ನಾವೆಲ್ಲರೂ ಈ ಸಮಯಕ್ಕಾಗಿ ಕಾಯುತ್ತಿದ್ದೆವು. ಅಕ್ಟೋಬರ್ 13ರಂದು ಎಂಪಿಎಲ್ ಸ್ಪೋರ್ಟ್ಸ್ನಲ್ಲಿ ಭಾರತ ತಂಡದ ನೂತನ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಜೆರ್ಸಿ ಅನಾವರಣ ಆಗಲಿದೆ" ಎಂದು ಬಿಸಿಸಿಐ ಟ್ವೀಟ್ ಮಾಡಿದೆ.
ಟೀಂ ಇಂಡಿಯಾ 1992 ವಿಶ್ವಕಪ್ ವೇಳೆ ಧರಿಸಿದ್ದ ಜೆರ್ಸಿಯನ್ನು ಹೋಲುವ ಸಮವಸ್ತ್ರ ಇದಾಗಿರಲಿದೆ. ಈ ಜೆರ್ಸಿಯನ್ನು ಭಾರತೀಯ ಕ್ರಿಕೆಟ್ ತಂಡದ ಕಿಟ್ ಪ್ರಾಯೋಜಕರಾದ ಎಂಪಿಎಲ್ ಸ್ಪೋರ್ಟ್ಸ್ ಬಿಡುಗಡೆಗೊಳಿಸಲಿದೆ.
ಟೀಂ ಇಂಡಿಯಾ ಕ್ರಿಕೆಟಿಗರು ಕಳೆದ ಒಂದು ವರ್ಷದಿಂದ ರೆಟ್ರೋ ಮಾದರಿಯ ನೀಲಿ ಸಮವಸ್ತ್ರ ಧರಿಸುತ್ತಿದ್ದರು. ಇದೀಗ ಹೊಸ ವಿನ್ಯಾಸದ ಸಮವಸ್ತ್ರದೊಂದಿಗೆ ಟೀಂ ಇಂಡಿಯಾ ಕಣಕ್ಕಿಳಿಯಲಿದೆ.