ನವದೆಹಲಿ, ಅ.16 (DaijiworldNews/PY): ಟೀಂ ಇಂಡಿಯಾದ ಮುಖ್ಯ ಕೋಚ್ ಆಗಲು ಭಾರತದ ಬ್ಯಾಟಿಂಗ್ ದಿಗ್ಗಜ ರಾಹುಲ್ ದ್ರಾವಿಡ್ ಅವರು ಒಪ್ಪಿಗೆ ನೀಡಿದ್ದಾರೆ ಎಂದು ವರದಿಯಾಗಿದೆ.
ಶುಕ್ರವಾರ ದುಬೈನಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದ ಸಂದರ್ಭ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಹಾಗೂ ಖಜಾಂಜಿ ಅರುಣ್ ಧುಮಾಲ್ ಅವರು ರಾಹುಲ್ ದ್ರಾವಿಡ್ ಅವರೊಂದಿಗೆ ಚರ್ಚೆ ನಡೆಸಿದ್ದು, ಈ ವೇಳೆ ದ್ರಾವಿಡ್ ಅವರನ್ನು ಮುಖ್ಯ ಕೋಚ್ ಸ್ಥಾನಕ್ಕೆ ಒಪ್ಪಿಸಲಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಭಾರತ ತಂಡದ ಮುಂದಿನ ಮುಖ್ಯ ಕೋಚ್ ಆಗುವುದನ್ನು ದ್ರಾವಿಡ್ ಅವರು ದೃಢಪಡಿಸಿದ್ದಾರೆ. ಶೀಘ್ರವೇ ದ್ರಾವಿಡ್ ಅವರು ಎನ್ಸಿಎ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ದ್ರಾವಿಡ್ ಅವರ ಆಪ್ತ ಪರಾಸ್ ಮಾಂಬ್ರೆ ಅವರು ಬೌಲಿಂಗ್ ಕೋಚ್ ಆಗಿ ನೇಮಕವಾಗಿದ್ದಾರೆ. ತಂಡದ ಬ್ಯಾಟಿಂಗ್ ಕೋಚ್ ಆಗಿ ವಿಕ್ರಮ್ ರಾಥೋರ್ ಮುಂದುವರಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.
ದ್ರಾವಿಡ್ ಅವರಿಗೆ 2 ವರ್ಷಗಳ ಕಾಲ ಗುತ್ತಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಇವರು ಸುಮಾರು 10 ಕೋಟಿ ರೂ. ಸಂಬಳ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.