ನವದೆಹಲಿ, ಅ 23 (DaijiworldNews/MS): 2021 ರ ಟಿ 20 ವಿಶ್ವಕಪ್ ನಂತರ ಭಾರತದ ಟಿ 20 ಐ ನಾಯಕತ್ವವನ್ನು ತೊರೆಯುವುದಾಗಿ ಹೇಳಿದ ವಿರಾಟ್ ಕೊಹ್ಲಿಯ ನಿರ್ಧಾರದಿಂದ ಬಿಸಿಸಿಐ ಅಧ್ಯಕ್ಷ ಮತ್ತು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಸಾಮಾನ್ಯ ಕ್ರಿಕೆಟ್ ಪ್ರೇಮಿ, ಸಾರ್ವಜನಿಕರಂತೆ ಆಶ್ಚರ್ಯಚಕಿತರಾಗಿದ್ದಾರೆ.
ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, " ವಿರಾಟ್ ಕೊಹ್ಲಿ ಅವರು ನಾಯಕತ್ವದಿಂದ ಕೆಳಗಿಳಿಯುವ ಬಗ್ಗೆ ನಿರ್ಧರಿಸಿರುವುದನ್ನು ಕೇಳಿ ನನಗೆ ಆಶ್ಚರ್ಯವಾಯಿತು. ಮಾತ್ರವಲ್ಲದೆ ಇದು ವಿರಾಟ್ ಕೊಹ್ಲಿ ಅವರ ಸ್ವಂತ ನಿರ್ಧಾರವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ನಾವು (ಬಿಸಿಸಿಐ) ವಿರಾಟ್ ಜತೆ ನಾಯಕತ್ವದ ಬಗ್ಗೆ ಈವರೆಗೆ ಯಾವುದೇ ರೀತಿಯ ಮಾತುಕತೆ ನಡೆಸಿಲ್ಲ. ಜತೆಗೆ, ಅವರ ಮೇಲೆ ಯಾವುದೇ ಒತ್ತಡವನ್ನು ಹಾಕಿಲ್ಲ. ನಾನು ಒಬ್ಬ ಆಟಗಾರನಾಗಿದ್ದವನು. ಇತರೆ ಆಟಗಾರರ ಮೇಲೆ ಒತ್ತಡ ಹಾಕುವಂತಹ ಕೆಲಸ ಎಂದಿಗೂ ಮಾಡುವುದಿಲ್ಲ' ಎಂದು ಹೇಳಿದ್ದಾರೆ.
ಕೊಹ್ಲಿಯ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರವು ಅಂತರರಾಷ್ಟ್ರೀಯ ಕ್ರಿಕೆಟ್ನ ಹೆಚ್ಚುತ್ತಿರುವ ಬೇಡಿಕೆಗಳ ಕಾರಣದಿಂದಾಗಿರಬಹುದು ಎಂದು ಹೇಳಿದರು.
'ನಾಯಕರಾಗಿ ತಂಡವನ್ನು ಮುನ್ನಡೆಸುತ್ತಿರುವುದು ಒಂದು ಹಂತದವರೆಗೆ ಚೆನ್ನಾಗಿರುತ್ತದೆ. ಇದರಿಂದ ಸಾಕಷ್ಟು ಖ್ಯಾತಿ, ಗೌರವ ಪಡೆಯಬಹುದು. ಆದರೆ, ಒಬ್ಬ ಆಟಗಾರನಾಗಿ ಮಾನಸಿಕ ಮತ್ತು ದೈಹಿಕ ಒತ್ತಡಕ್ಕೆ ಒಳಗಾಗಬೇಕಾಗುತ್ತದೆ. ಕೇವಲ ತೆಂಡೂಲ್ಕರ್ ಅಥವಾ ಗಂಗೂಲಿ ಅಥವಾ ಧೋನಿ ಅಥವಾ ಕೊಹ್ಲಿಗೆ ಮಾತ್ರ ಸೀಮಿತವಲ್ಲ , ಮುಂದೆ ಬರುವ ನಾಯಕರಿಗೂ ಸಹ. ಇದು ಕಠಿಣ ಕೆಲಸ . ಭವಿಷ್ಯದಲ್ಲಿ ನಾಯಕರಾಗುವವರು ಸಹ ಒತ್ತಡ ಎದುರಿಸಬೇಕಾಗುತ್ತದೆ. ಎಂದು ಗಂಗೂಲಿ ಹೇಳಿದ್ದಾರೆ.
2017 ರಲ್ಲಿ ಭಾರತದ ವೈಟ್ ಬಾಲ್ ನಾಯಕನಾಗಿ ಅಧಿಕಾರ ವಹಿಸಿಕೊಂಡರೂ ಐಸಿಸಿ ಟ್ರೋಫಿ ಗೆಲ್ಲಲು ವಿಫಲವಾದ ನಂತರ ಕೊಹ್ಲಿ ನಾಯಕನಾಗಿ ಒತ್ತಡದಲ್ಲಿದ್ದರು ಎಂದು ವರದಿಗಳಿವೆ.