ದುಬೈ, ನ. 11 (DaijiworldNews/SM): ಇಲ್ಲಿ ನಡೆದ ಟಿ-20 ವಿಶ್ವಕಪ್ ಎರಡನೇ ಸೆಮಿಫೈನಲ್ ನಲ್ಲಿ ಪಾಕಿಸ್ತಾನ ಮುಗ್ಗರಿಸಿದ್ದು, ಫೈನಲ್ ಪ್ರವೇಶಿಸುವ ಆಸೆ ಕಮರಿದೆ. ಲೀಗ್ ಗಳಲ್ಲಿ ಸೇಲಿಲ್ಲದೆ ಸೆಮಿಫೈನಲ್ ಪ್ರವೇಶಿಸಿದ್ದ ಪಾಕ್ ಆಸಿಸ್ ವಿರುದ್ಧ ಗೆಲ್ಲುವ ವಿಶ್ವಾಸ ಹೊಂದಿತ್ತು. ಆದರೆ, ಕೊನೇ ಕ್ಷಣದಲ್ಲಿ ಪಂದ್ಯದ ಗತಿ ಬದಲಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಪಾಕ್ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ಗಳ ನಷ್ಟಕ್ಕೆ 177ರನ್ ಗಳಿಸಿತು. ಪಾಕ್ ಪರ ಮೊಹಮ್ಮದ್ ರಿಜ್ವಾನ್ 67, ನಾಯಕ ಬಾಬರ್ 39, ಫಕರ್ ಜಮಾನ್ 55 ರನ್ ಸಿಡಿಸಿದರು.
ಇನ್ನು ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡ ಆರಂಭದಲ್ಲೇ ಫಿಂಚ್ ಅವರನ್ನು ಕಳೆದುಕೊಂಡಿತು. ಬಳಿಕ ಡೇವಿಡ್ ವಾರ್ನರ್ ತಂಡಕ್ಕೆ ನೆರವಾದರು. 49 ರನ್ ಸಿಡಿಸಿ ಮಿಂಚಿದರು. ಮಿಚೆಲ್ ಮಾರ್ಷ್ 28, ಸ್ಟೋನಿಸ್ 40, ವೇಡ್ 41 ರನ್ ಗಳಿಸಿದರು. ಆ ಮೂಲಕ ಸ್ಟೋನಿಸ್ ಹಾಗೂ ವೇಡ್ ತಂಡದ ಗೆಲುವಿನ ರುವಾರಿ ಎಣಿಸಿಕೊಂಡರು.
ಇದೀಗ ಆಸ್ಟ್ರೇಲಿಯಾ ತಂಡ ಟಿ-20 ಫೈನಲ್ ಪ್ರವೇಶಿಸಿದ್ದು, ನ್ಯೂಜಿಲ್ಯಾಂಡ್ ವಿರುದ್ಧ ಸೆಣಸಲಿದೆ. ರವಿವಾರದಂದು ನಡೆಯುವ ಫೈನಲ್ ಪಂದ್ಯದತ್ತ ಎಲ್ಲರ ಚಿತ್ತ ನೆಟ್ಟಿದೆ. ಇನ್ನು ಮೊದಲ ಬಾರಿಗೆ ಫೈನಲ್ ಗೆಲ್ಲಬೇಕೆಂಬ ಆಸೆಯಲ್ಲಿ ಕಿವೀಸ್ ಇದ್ದು, ಮತ್ತೊಮ್ಮೆ ಕಪ್ ಎತ್ತುವೆವು ಎನ್ನುವ ವಿಶ್ವಾಸ ಆಸಿಸ್ ಬಳಗದಲ್ಲಿದೆ.