ನವದೆಹಲಿ, ಡಿ.11 (DaijiworldNews/PY): "2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಭಾರತ ತಂಡದ ಆಯ್ಕೆ ವಿಚಾರದಲ್ಲಿ ಆಗಿನ ನಾಯಕ ವಿರಾಟ್ ಕೊಯ್ಲಿ ನೀಡಿದ್ದ ಸಲಹೆ ಆಯ್ಕೆಯನ್ನು ಸಮಿತಿ ಪರಿಗಣಿಸಿರಲಿಲ್ಲ" ಎಂದು ಮಾಜಿ ಕೋಚ್ ರವಿಶಾಸ್ತ್ರಿ ದೂರಿದ್ದಾರೆ.
"ಇನ್ನೂ ಕೆಲವು ತಿಂಗಳು ಇದ್ದಾಗಲೇ, ತಂಡ ನಾಲ್ಕನೇ ಕ್ರಮಾಂಕದಲ್ಲಿ ಅಂಬಟಿ ರಾಯ್ಡು ಕಣಕ್ಕಿಳಿಯಬೇಕು ಎಂದು ವಿರಾಟ್ ಕೊಯ್ಲಿ ತಿಳಿಸಿದ್ದರು. ಆದರೂ, ರಾಯ್ಡು ಅವರನ್ನು ಎಂಎಸ್ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಆಯ್ಕೆ ಮಾಡಿರಲಿಲ್ಲ"ಎಂದು ದೂರಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ರವಿಶಾಸ್ತ್ರಿ, "ತಂಡದಲ್ಲಿ ಮೂವರು ವಿಕೆಟ್ ಕೀಪರ್ಗಳಿಗೆ ಸ್ಥಾನ ನೀಡುವ ಬದಲು ಅಂಬಟಿ ರಾಯ್ಡು ಅಥವಾ ಶ್ರೇಯಸ್ ಅಯ್ಯರ್ಗೆ ಸ್ಥಾನ ನೀಡಬಹುದಿತ್ತು" ಎಂದಿದ್ದಾರೆ.
"ವಿಶ್ವಕಪ್ಗೆ ಮೂವರು ವಿಕೆಟ್ ಕೀಪರ್ಗಳನ್ನು ಆಯ್ಕೆ ಮಾಡಿದ್ದು, ನನಗೆ ಒಪ್ಪಿಗೆ ಇರಲಿಲ್ಲ. ರಾಯ್ಡು ಅಥವಾ ಶ್ರೇಯಸ್ ತಂಡದಲ್ಲಿ ಇರಬೇಕಿತ್ತು. ಸಲಹೆ ಕೇಳಿದಾಗ ಅಥವಾ ಸಾಮಾನ್ಯ ಚರ್ಚೆ ವೇಳೆಗಳಲ್ಲಿ ಹೊರತುಪಡಿಸಿ, ಆಯ್ಕೆ ವಿಚಾರದಲ್ಲಿ ನಾನು ಎಂದಿಗೂ ಮಧ್ಯಪ್ರವೇಶಿಸಿಲ್ಲ" ಎಂದು ಹೇಳಿದ್ದಾರೆ.
ವಿರಾಟ್ ಕೊಯ್ಲಿ ಅವರ ನಾಯಕತ್ವ ಟೀಂ ಇಂಡಿಯಾ, ಇತ್ತೀಚೆಗೆ ದುಬೈನಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಗುಂಪು ಹಂತದಲ್ಲಿ ನಿರ್ಗಮಿಸಿತ್ತು. ಬಳಿಕ ವಿರಾಟ್ ಕೊಯ್ಲಿ ಅವರು ಚುಟುಕು ಕ್ರಿಕೆಟ್ನಲ್ಲಿ ನಾಯಕತ್ವ ತೊರೆದಿದ್ದಾರೆ.