ಮುಂಬೈ, ಡಿ 15 (DaijiworldNews/MS): ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಹಲವು ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಮಾತ್ರವಲ್ಲದೆ ಇದೇ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಏಕದಿನ ಸರಣಿ ಆಡಲಿದ್ದೇನೆ , ನನ್ನ ಮತ್ತು ರೋಹಿತ್ ಶರ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಕೊಹ್ಲಿ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಏಕದಿನ ಸರಣಿಯಿಂದ ಹೊರಗುಳಿಯುತ್ತೀರಾ ಎಂದು ಕೊಹ್ಲಿಯನ್ನು ಕೇಳಿದಾಗ ಮೂರು ಪಂದ್ಯಗಳ ಏಕದಿನ ಸರಣಿಗೆ ತಾನು ಲಭ್ಯವಿರುತ್ತೇನೆ ಎಂದು ಕೊಹ್ಲಿ ಸ್ಪಷ್ಟಪಡಿಸಿದ್ದಾರೆ. ಏಕದಿನ ಸರಣಿ ಆಡಲು ತಾನು ಸಿದ್ಧನಿದ್ದೇನೆ, ನಾನು ಬಿಸಿಸಿಐನಿಂದ ವಿಶ್ರಾಂತಿ ನೀಡಲು ಮನವಿ ಮಾಡಿಲ್ಲ. ನನಗೆ ಯಾವುದೇ ವಿಶ್ರಾಂತಿಯ ಅಗತ್ಯವಿಲ್ಲ ಎಂದು ಹೇಳಿದರು.
ಏಕದಿನ ಸರಣಿಗೆ ಹೊಸ ನಾಯಕನನ್ನು ಘೋಷಿಸುವ ಮುನ್ನ ಮುಖ್ಯ ಆಯ್ಕೆಗಾರರು ನನಗೆ ಮಾಹಿತಿ ನೀಡಿದ್ದರು. ಏಕದಿನ ತಂಡದ ನಾಯಕ ಸ್ಥಾನ ನೀಡುತ್ತಿಲ್ಲ ಎಂದಿದ್ದರು ಎಂದು ಸ್ಪಷ್ಪಪಡಿಸಿದರು. ಡಿಸೆಂಬರ್ 26 ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ. ರೋಹಿತ್ ಶರ್ಮಾ ಗಾಯದಿಂದಾಗಿ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ.