ನವದೆಹಲಿ, ಡಿ 20 (DaijiworldNews/MS): ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಭಾರತದ ಕಿಡಂಬಿ ಶ್ರೀಕಾಂತ್ ಅವರು ಸಿಂಗಾಪುರದ ಆಟಗಾರ ಲೋಹ್ ಕೀನ್ ಯೂ ವಿರುದ್ಧ ಸೋಲುವುದರ ಮೂಲಕ ಟೂರ್ನಿಯಲ್ಲಿನ ತಮ್ಮ ಓಟವನ್ನು ಅಂತ್ಯಗೊಳಿಸಿ ರಜತ ಪದಕಕ್ಕೆ ಮುತ್ತಿಟ್ಟಿದ್ದಾರೆ. ಹೀಗಾಗಿ ವಿಶ್ವ ಚಾಂಪಿಯನ್ಶಿಪ್ ಟೈಟಲ್ ತಮ್ಮದಾಗಿಸಿಕೊಳ್ಳವ ಸುವರ್ಣಾವಕಾಶವನ್ನು ಭಾರತದ ಕಿಡಂಬಿ ಶ್ರೀಕಾಂತ್ ಅವರು ಸ್ವಲ್ಪದರಲ್ಲಿ ಕಳೆದುಕೊಂಡಿದ್ದಾರೆ.
ರೋಚಕವಾಗಿ ನಡೆದ ಫೈನಲ್ ಪಂದ್ಯದಲ್ಲಿ ವಿಶ್ವದ 22ನೇ ಶ್ರೇಯಾಂಕದ ಆಟಗಾರ ಸಿಂಗಾಪುರದ ಲೊ ಕಿಯೊನ್ ಯೊ ಎದುರು 15-21, 20-22 ನೇರ ಸೆಟ್ ಗಳಿಂದ ಕಿಡಂಬಿ ಪರಾಭವಗೊಂಡರು.42 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 15ನೇ ಶ್ರೇಯಾಂಕದ ಶ್ರೀಕಾಂತ್ ಭಾರಿ ಹೋರಾಟ ನಡೆಸಿದರಾದರೂ ನಿರ್ಣಾಯಕ ಕ್ಷಣಗಳಲ್ಲಿ ಎದುರಾಳಿ ಮೇಲುಗೈ ಸಾಧಿಸಿದರು. ಅದರೂ ಭಾರತದ ಕಿಡಂಬಿ ಶ್ರೀಕಾಂತ್ ಇತಿಹಾಸ ಬರೆದಿದ್ದು, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಷಟ್ಲರ್ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.
ಫೈನಲ್ ಪಂದ್ಯದಲ್ಲಿ ಮುಗ್ಗರಿಸಿರುವ ಕಿಡಂಬಿ ಶ್ರೀಕಾಂತ್ ಇತ್ತೀಚೆಗಷ್ಟೇ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಮತ್ತೊಬ್ಬ ಆಟಗಾರ ಲಕ್ಷ್ಯ ಸೇನ್ ವಿರುದ್ಧ ಜಯಗಳಿಸಿದ್ದರು. ಈ ಮೂಲಕ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸೆಮಿಫೈನಲ್ ಸುತ್ತಿಗೆ ಇಬ್ಬರು ಭಾರತೀಯರು ಪ್ರವೇಶಿಸಿದ್ದರು ಎಂಬುದು ವಿಶೇಷವಾಗಿತ್ತು.