ಕೋಲ್ಕತ್ತಾ, ಡಿ 28 (DaijiworldNews/MS): ಟೀಂ ಇಂಡಿಯಾ ಮಾಜಿ ನಾಯಕ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸ್ಥಳೀಯ ವರದಿಗಳ ಪ್ರಕಾರ, ಗಂಗೂಲಿ ಅವರಿಗೆ ಕೊವೀಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕೋಲ್ಕತ್ತಾದ ವುಡ್ ಲ್ಯಾಂಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ.ಕೋವಿಡ್ ಲಕ್ಷಣ ಕಾಣಿಸಿಕೊಂಡ ಹಿನ್ನಲೆಯಲ್ಲಿ ಪರೀಕ್ಷೆ ಮಾಡಿಸಲಾಗಿದ್ದು, ಪಾಸಿಟಿವ್ ಬಂದಿದೆ.
ಈ ವರ್ಷ ಆರಂಭದಲ್ಲಿ ಎದೆನೋವು ಕಾಣಿಸಿಕೊಂಡು ಎರಡು ಬಾರಿ ಆಸ್ಪತ್ರೆಗೆ ದಾಖಲಾಗಿದ್ದು, ಈಗ ಮೂರನೇ ಬಾರಿ ಕೊವೀಡ್ ಕಾರಣದಿಂದ ದಾಖಲಾಗಿದ್ದಾರೆ. ಇದಕ್ಕೂ ಮೊದಲು ಗಂಗೂಲಿ ಅವರು ತಮ್ಮ ಕೋಲ್ಕತ್ತಾದ ಮನೆಯಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತಕ್ಕೆ ಒಳಗಾಗಿ ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಿದ್ದರು. ಇದರ ಬೆನ್ನಲ್ಲೇ20 ದಿನಗಳ ನಂತರ, ಗಂಗೂಲಿಗೆ ಇದೇ ರೀತಿಯ ಎದೆನೋವು ಕಾಣಿಸಿಕೊಂಡು ಜನವರಿ 28 ರಂದು ಎರಡನೇ ಸುತ್ತಿನ ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಿದ್ದರು. ಈ ಸಂದರ್ಭ ಎರಡು ಸ್ಟೆಂಟ್ಗಳನ್ನು ಅಳವಡಿಸಲಾಗಿತ್ತು.
ಗಂಗೂಲಿ ಅವರು ಮಾರ್ಚ್ನಲ್ಲಿ ಮತ್ತೆ ತಮ್ಮ ಚಟುವಟಿಕೆಯನ್ನು ಪುನರಾರಂಭಿಸಿದ್ದೂ ಕೋವಿಡ್ -19 ವಿರುದ್ಧ ಸಂಪೂರ್ಣವಾಗಿ ಲಸಿಕೆಯನ್ನು ಪಡೆದಿದ್ದರು. ಇದೀಗ ಭಾರತ ತಂಡದ ಮಾಜಿ ನಾಯಕ ಸೌಮ್ಯ ರೋಗಲಕ್ಷಣಗಳೊಂದಿಗೆ ಕೊರೊನಾ ವೈರಸ್ ಪಾಸಿಟಿವ್ ಇರುವುದು ದೃಢಪಟ್ಟಿದೆ.
ಗಂಗೂಲಿ ಅವರು 2019 ರಿಂದ ಬಿಸಿಸಿಐ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಅದಕ್ಕೂ ಮೊದಲು ಅವರು ಬಂಗಾಳ ಕ್ರಿಕೆಟ್ ಅಸೋಸಿಯೇಷನ್ನ ಮುಖ್ಯಸ್ಥರಾಗಿದ್ದರು. 'ದಾದಾ' ಎಂದು ಜನಪ್ರಿಯವಾಗಿ ಕರೆಯಲ್ಪಡುವ ಗಂಗೂಲಿ ಅವರು ಎಡಗೈ ಆರಂಭಿಕ ಬ್ಯಾಟ್ಸ್ಮನ್ ಮತ್ತು ಭಾರತೀಯ ಕ್ರಿಕೆಟ್ ತಂಡದ ನಾಯಕರಾಗಿ ತಮ್ಮ ಅದ್ಭುತ ಪ್ರದರ್ಶನಗಳಿಗೆ ಹೆಸರುವಾಸಿಯಾಗಿದ್ದಾರೆ.