ಮೆಲ್ಬರ್ನ್, ಜ 06 (DaijiworldNews/HR): ಕೊರೊನಾ ಲಸಿಕೆ ಪಡೆದ ಪುರಾವೆಗಳಿಲ್ಲದೆ ಮೆಲ್ಬರ್ನ್ಗೆ ಬಂದಿಳಿದಿದ ಜಗತ್ತಿನ ನಂ. 1 ಟೆನಿಸ್ ಆಟಗಾರ ನೊವಾಕ್ ಜಾಕೊವಿಚ್ ಅವರ ವೀಸಾವನ್ನು ಆಸ್ಟ್ರೇಲಿಯಾ ರದ್ದು ಮಾಡಿದೆ ಎಂದು ತಿಳಿದು ಬಂದಿದೆ.
ಆಸ್ಟ್ರೇಲಿಯ ಓಪನ್ ಟೆನಿಸ್ ಕ್ರೀಡಾ ಕೂಟದಲ್ಲಿ ಆಡಲು ಅನುಮತಿ ನೀಡಬೇಕು ಎಂದು ಕೋರಿ ಜಾಕೊವಿಚ್ ಸಲ್ಲಿಸಿದ್ದ ಅರ್ಜಿಯನ್ನು ವೈದ್ಯಕೀಯ ಮಂಡಳಿಗಳು ಅನುಮೋದಿಸಿತ್ತು.ಹೀಗಾಗಿ ಕೂಟದ ಆಯೋಜಕರು ಜಾಕೊವಿಚ್ಗೆ ಲಸಿಕೆ ವಿನಾಯಿತಿ ನೀಡಿದ್ದರು.
ಇನ್ನು ಆಸ್ಟ್ರೇಲಿಯಾಕ್ಕೆ ಪ್ರವೇಶ ಪಡೆಯಲು ಅಗತ್ಯವಿರುವ ದಾಖಲೆಗಳನ್ನು ಪೂರೈಸಲು ಜೊಕೊವಿಕ್ ವಿಫಲರಾಗಿದ್ದು, ಹೀಗಾಗಿ ಅವರ ವೀಸಾವನ್ನು ರದ್ದುಗೊಳಿಸಲಾಗಿದೆ ಎಂದು ಆಸ್ಟ್ರೇಲಿಯನ್ ಗಡಿ ರಕ್ಷಣಾ ಪಡೆ ತಿಳಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಎಲ್ಲರಿಗೂ ಒಂದೇ ನಿಯಮಗಳು. ಗಡಿಗೆ ಸಂಬಂಧಿಸಿದ ವಿಚಾರದಲ್ಲಿ ಅದು ಇನ್ನೂ ಕಠಿಣವಾಗಿರುತ್ತವೆ ಎಂದು ಹೇಳಿದ್ದಾರೆ.